ಸೋರುತ್ತಿದೆ ಸರ್ಕಾರಿ ಕಚೇರಿ ಮಾಳಿಗೆ VITTAL

ವಿಟ್ಲ ಉಪ ನೋಂದಣಿ ಕಚೇರಿಯ ಕಟ್ಟಡದ ಮೇಲ್ಛಾವಣಿಗೆ ಟರ್ಪಾಲು ಹಾಸಿರುವುದು.
ವಿಟ್ಲ ಉಪ ನೋಂದಣಿ ಕಚೇರಿಯ ಕಟ್ಟಡದ ಮೇಲ್ಛಾವಣಿಗೆ ಟರ್ಪಾಲು ಹಾಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಯಿಂದ ರಕ್ಷಣೆಗೆ ಟರ್ಪಾಲು ಹೊದಿಕೆ
  • ಛಾವಣಿ ಶಿಥಿಲಗೊಂಡರೂ ಸೂಕ್ತ ನಿರ್ವಹಣೆ ಇಲ್ಲ
ಪುತ್ತೂರು: ಶತಮಾನ ಪೂರೈಸಿದ ವಿಟ್ಲದ ಉಪ ನೋಂದಣಿ ಕಚೇರಿಯ ಛಾವಣಿ ಶಿಥಿಲಗೊಂಡು ಮಳೆ ನೀರು ಒಳನುಗ್ಗುತ್ತಿದೆ. ಇದೇ ರೀತಿಯಲ್ಲಿ ಪುತ್ತೂರು ಉಪ ವಿಭಾಗಾಧಿಕಾರಿಗಳ ಸರ್ಕಾರಿ ವಸತಿನಿಲಯದ ಛಾವಣಿಯೂ ಶಿಥಿಲಗೊಂಡಿದ್ದು, ಬೇಸಿಗೆಯಲ್ಲಿ ದುರಸ್ತಿ ಮಾಡಲು ಕಾಲಾವಕಾಶ ಸಿಗದೆ ಮಳೆಯಿಂದ ರಕ್ಷಿಸಲು ಟರ್ಪಾಲು ಹೊದಿಸಲಾಗಿದೆ.
ವಿಟ್ಲ ಹೋಬಳಿಯ ವ್ಯಾಪ್ತಿಯನ್ನು ಹೊಂದಿರುವ ವಿಟ್ಲ ಸಬ್‌ರಿಜಿಸ್ಟ್ರಾರ್ ಕಚೇರಿ ೧೯೦೦ರ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿದೆ. ಕಾಲಕಾಲಕ್ಕೆ ದುರಸ್ತಿ ಕಾರ್ಯ ನಡೆಸಿಕೊಂಡು ಬಂದ ಕಾರಣ ಶತಮಾನ ಪೂರೈಸಿದರೂ ಗೋಡೆಗಳು ಇಂದಿಗೂ ಗತಕಾಲದ ವೈಭವವನ್ನು ಸಾರುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದ ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಸಂಘ ಸಂಸ್ಥೆಗಳ ನೆರವಿನಲ್ಲಿಯೂ ದುರಸ್ತಿ ಮಾಡಬಾರದೆಂಬ ಕಾನೂನಿನಿಂದಾಗಿ ನಿರ್ವಹಣೆ ಇಲ್ಲದೆ ಕಟ್ಟಡದ ಛಾವಣಿ ಸೋರುತ್ತಿದೆ.
ಅನೇಕ ಇಲಾಖೆಗಳಿಗೆ ಸ್ವಂತ ನಿವೇಶನ: ವಿಟ್ಲದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಜತೆಗೆ ಸ್ಥಾಪನೆಯಾದ ಪೊಲೀಸ್ ಠಾಣೆ ಹೊಸ ಕಟ್ಟಡಕ್ಕೆ ಸ್ಥಳಾಂತವಾಗಿ ಹಳೇ ಕಟ್ಟಡ ನೆಲಸಮವಾಗಿದೆ. ಕಂದಾಯ ಇಲಾಖೆಯ ಕಟ್ಟಡವೂ ಹೊಸತಾಗಿದೆ. ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ ಸೇರಿ ವಿವಿಧ ಇಲಾಖೆಗಳು ಸ್ವಂತ ನಿವೇಶನದಲ್ಲಿ ಕಾರ್ಯಾಚರಿಸುತ್ತಿವೆ. ಆದರೆ ಅತ್ಯಂತ ಪ್ರಮುಖವಾದ ಉಪನೋಂದಣಿ ಕಚೇರಿ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಛಾವಣಿ ಹಾಳಾಗಿ ಮಳೆಗಾಲದಲ್ಲಿ ನೀರು ಸೋರುವುದನ್ನು ತಡೆಯಲು ಟರ್ಪಾಲು ಹಾಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಉಪ ವಿಭಾಗ ದಂಡಾಧಿಕಾರಿಗಳ ಸರ್ಕಾರಿ ವಸತಿನಿಲಯಕ್ಕೂ ಇದೇ ಸ್ಥಿತಿ ಬಂದಿದ್ದು ದುರಸ್ತಿ ಕಾರ್ಯಕ್ಕೆ ಆಸಕ್ತಿ ವಹಿಸುತ್ತಿಲ್ಲ.
ಪುತ್ತೂರು ಸಹಾಯಕ ಆಯುಕ್ತರ ಸರ್ಕಾರಿ ವಸತಿನಿಲಯದ ಮೇಲೆ ಹಾಸಿರುವ ಟರ್ಪಾಲನ್ನು ಸರಿಪಡಿಸುತ್ತಿರುವ ಕಾರ್ಮಿಕರು.

ಎರಡು ವರ್ಷದಿಂದ ಟರ್ಪಾಲು

ಪುತ್ತೂರು ಉಪ ವಿಭಾಗದ ದಂಡಾಧಿಕಾರಿಗಳಿಗೆ ಸರ್ಕಾರದಿಂದ ನೀಡುವ ವಸತಿನಿಲಯದ ಛಾವಣಿಗೆ ಕಳೆದ ಎರಡು ವರ್ಷದಿಂದ ಟರ್ಪಾಲು ಹಾಸಲಾಗಿದೆ. ಛಾವಣಿ ಸೋರುತ್ತದಾ ಎಂದು ಪ್ರಶ್ನಿಸಿದರೆ ಪಿಒಪಿ ತುಂಡಾಗಬಾರದೆಂದು ಟರ್ಪಾಲು ಹಾಗೇ ಬಿಡಲಾಗಿದೆ ಎನ್ನುತ್ತಾರೆ ಅಽಕಾರಿಗಳು.

ದಾಖಲೆಗಳ ರಕ್ಷಣೆಯೇ ಸವಾಲು

ಉಪ ನೋಂದಣಿ ಕಚೇರಿ ಸರ್ಕಾರದ ಪಾಲಿಗೆ ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಕಚೇರಿ ನಿರ್ವಹಣೆಗೆ ಸರಿಯಾದ ಅನುದಾನ ಮಾತ್ರ ಇಲ್ಲ. ಇದರಿಂದ ದಾಖಲೆಗಳು ಮಳೆಗೆ ಒದ್ದೆಯಾಗುವ ಸ್ಥಿತಿಯಿದ್ದು ರಕ್ಷಣೆಯೇ ಸವಾಲಾಗಿದೆ. ಶಿಥಿಲಾವಸ್ಥೆಗೆ ತಲುಪಿದರೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಯಾರೊಬ್ಬರೂ ಮುಂದಾಗದಿರುವುದು ಆಡಳಿತ ವ್ಯವಸ್ಥೆಗೆ ಕೈಗನ್ನಡಿಯಾಗಿದೆ.
"

ಆಡಳಿತ ವ್ಯವಸ್ಥೆಯಲ್ಲಿ ದುಂದುವೆಚ್ಚ ಮಾಡಲು ಬೇಕಾದಷ್ಟು ಅನುದಾನವಿದೆ. ಸಾರ್ವಜನಿಕರಿಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲು ಮಾತ್ರ ಹಣದ ಕೊರತೆಯಾಗುತ್ತದೆ. ಶತಮಾನದ ಕಟ್ಟಡಕ್ಕೆ ಸರಿಯಾದ ವ್ಯವಸ್ಥೆಯಿಲ್ಲದೆ, ಭೂದಾಖಲೆಗಳು ನೆನೆಯುವ ಹಂತಕ್ಕೆ ತಲುಪಿದರೂ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟ ಸಂಗತಿ.

— ಶಿವಕುಮಾರ್, ಕೃಷಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net