ಬಜೆಟ್‌ನಲ್ಲಿ ಗೇರು ಅಭಿವೃದ್ಧಿಗೆ ಅನುದಾನ ಮೀಸಲಿಗೆ ಒತ್ತಾಯಿಸುವೆ ಕಾಜು ಶತಮಾನೋತ್ಸವ ಸಮ್ಮೇಳನದ ಸಮಾರೋಪದಲ್ಲಿ ಯು.ಟಿ.ಖಾದರ್ ಭರವಸೆ
ಸಮಾರಂಭದಲ್ಲಿ ಗೇರು ಬೇಸಾಯದ ಸಮಗ್ರ ವರದಿ ಒಳಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು.
Published on:
Copied
Follow Us
ಮಂಗಳೂರು: ಗೇರು ಅಭಿವೃದ್ಧಿಗೆ ಸಂಬಂಧಿಸಿ ಪೂರಕ ಬೇಡಿಕೆ ಸಿದ್ಧಪಡಿಸಿ ನೀಡಿದರೆ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಗೋಡಂಬಿ ಕಾರ್ಖಾನೆ ಸ್ಥಾಪನೆಯಾದ 100ನೇ ವರ್ಷದ ಸವಿನೆನಪಿನಲ್ಲಿ ಕರ್ನಾಟಕ ಗೋಡಂಬಿ ತಯಾರಕರ ಸಂಘದ (ಕೆಸಿಎಂಎ) ವತಿಯಿಂದ ಮಂಗಳೂರಿನ ಡಾ.ಟಿ.ಎಂ.ಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆಯೋಜಿಸಲಾದ ಮೂರು ದಿನಗಳ ಕಾಜು ಶತಮಾನೋತ್ಸವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗೋಡಂಬಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೇರು ಬೆಳೆ ಹೆಚ್ಚಾಗಬೇಕು. ಬೆಳೆಗಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಗೇರು ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಲಾಭದಾಯಕವಾಗಲಿದೆ ಎಂದರು.
ಕರಾವಳಿಯದ್ದು ಗುಣಮಟ್ಟದ ಗೋಡಂಬಿ
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಕರಾವಳಿಯ ಗೋಡಂಬಿಗೆ ದೇಶ, ವಿದೇಶಗಳಲ್ಲಿ ವ್ಯಾಪಕ ಬೇಡಿಕೆ ಇದೆ. ಗುಣಮಟ್ಟದ ಕಾಯ್ದುಕೊಂಡಿರುವುದು ಇದಕ್ಕೆ ಕಾರಣ. ಆದರೆ ಬೇಡಿಕೆ ಇರುವಷ್ಟು ಗೇರು ರಾಜ್ಯದಲ್ಲಿ ಸಿಗುತ್ತಿಲ್ಲ. ಅಭಾವ ನಿವಾರಿಸಲು ಗೇರು ಅಭಿವೃದ್ಧಿ ನಿಗಮದ ಮೂಲಕ ರಾಜ್ಯದೆಲ್ಲೆಡೆ ಲಕ್ಷಾಂತರ ಗೇರು ಗಿಡಗಳನ್ನು ಬೆಳೆಸಲು ಸರ್ಕಾರ ಕ್ರಮ ವಹಿಸಬೇಕು ಎಂದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಗೋಡಂಬಿ ಉದ್ಯಮವೂ ಕೂಡ ಆರ್ಥಿಕತೆಗೆ ಹಾಗೂ ಉದ್ಯೋಗಕ್ಕೆ ಹೆಚ್ಚಿನ್ ಕೊಡುಗೆ ನೀಡಿದೆ. ರಾಜ್ಯ, ಕೇಂದ್ರ ಸರ್ಕಾರ ಗೇರು ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡಬೇಕಿದೆ ಎಂದರು.
ಸಮಾರಂಭದಲ್ಲಿ ಗೇರು ಬೇಸಾಯದ ಸಮಗ್ರ ವರದಿ ಒಳಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಡಾ.ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಪೇಜಾವರ ಮಠದಿಂದ ಪ್ರತಿನಿಧಿ ವಾಸುದೇವ ಭಟ್, ಕಾಜು ಶತಮಾನೋತ್ಸವ ಸಮ್ಮೇಳನ ಸಮಿತಿ ಸಂಚಾಲಕ ಕಲ್ಬಾವಿ ಪ್ರಕಾಶ್ ರಾವ್, ಅಮಿತ್ ಪೈ, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಗೋಡಂಬಿ ತಯಾರಕರ ಸಂಘದ ಅಧ್ಯಕ್ಷ ಎ.ಕೆ.ರಾವ್ ಸ್ವಾಗತಿಸಿದರು. ಸುಬ್ರಾಯ ಪೈ ವಂದಿಸಿದರು. ಶರ್ಮಿಳಾ ಅಮಿನ್ ನಿರೂಪಿಸಿದರು.
12 ಲಕ್ಷ ಗೇರು ಗಿಡ ವಿತರಣೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ಹಹಣಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಗೇರು ಬೆಳೆ ಕೊರತೆ ನೀಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಜಯಲಕ್ಷ್ಮೀ ಪ್ರತಿಷ್ಠಾನದಿಂದ ರಾಜ್ಯದೆಲ್ಲೆಡೆ ರೈತರಿಗೆ ಉಚಿತವಾಗಿ ಗೇರು ಗಿಡಗಳನ್ನು ವಿತರಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅಭಿಯಾನದ ಮೂಲಕ ಸುಮಾರು 12 ಲಕ್ಷ ಗಿಡಗಳನ್ನು ವಿತರಿಸಲಾಗಿದ್ದು, ರೈತರಿಗೆ ಮಾಹಿತಿ ನೀಡಿ ಬೆಳೆಸಲಾಗುತ್ತಿದೆ ಎಂದರು.