

ಕಾಸರಗೋಡು: ಉಪ್ಪಳ ರೈಲ್ವೆ ಗೇಟ್ ಸಮೀಪದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ 55ರಿಂದ 60ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಪ್ಪಳ ಗೇಟ್ ಅಂಚೆಕಟ್ಟೆಯಲ್ಲಿ ಮಂಗಳೂರು ಭಾಗಕ್ಕೆ ತೆರಳುವ ರೈಲು ಹಳಿ ಸಮೀಪದ ಪೊದೆಗಳಲ್ಲಿ ಗುರುವಾರ ಸಂಜೆ ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತರೊಬ್ಬರ ಪತ್ತೆಯಾಗಿದ್ದರು. ಕೂಡಲೇ ಸ್ಥಳೀಯರು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ. ರೈಲು ಡಿಕ್ಕಿಯಾಗಿ ಗಾಯಗೊಂಡಿರಬಹುದೆಂದು ಶಂಕಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ಕಾಸರಗೋಡು: ವಿದ್ಯುತ್ ಕಳವುಗೈದಿರುವ ಬಗ್ಗೆ ಇಂಜಿನಿಯರ್ ನೀಡಿದ ದೂರಿನ ಮೇರೆಗೆ ಬೋವಿಕಾನ ನಿವಾಸಿ ಅಬ್ದುಲ್ ಹಮೀದ್ ವಿರುದ್ಧ ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರ್ಕಳ ಕೆಎಸ್‌ಇಬಿ ಉಪ ವಿಭಾಗದ ವ್ಯಾಪ್ತಿಯ ಬೋವಿಕಾನ ಮೀನು ಮಾರುಕಟ್ಟೆ ಸಮೀಪದಲ್ಲಿರುವ ಅಬ್ದುಲ್ ಹಮೀದ್ ಅವರ ಮನೆಗೆ 2024ರ ಜನವರಿ 1ರಿಂದ 2026ರ ಅಕ್ಟೋಬರ್ 22ರವರೆಗಿನ ಅವಧಿಯಲ್ಲಿ ವಿದ್ಯುತ್ ಮೀಟರ್‌ನಿಂದ ಸರ್ವಿಸ್ ವೈರ್ ಬದಲಾಯಿಸಿ ಬೇರೆ ಎರಡು ವೈರ್‌ಗಳನ್ನು ಬಳಸಿ ವಿದ್ಯುತ್ ಕಳವು ಮಾಡುವ ಮೂಲಕ ವಿದ್ಯುತ್ ಇಲಾಖೆಗೆ 22,242.06 ರೂ. ನಷ್ಟ ಉಂಟುಮಾಡಿರುವ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಕರಿಯಾ ಎ.ಕೆ. ದೂರು ನೀಡಿದ್ದಾರೆ.