ಈಡೇರದ ಕುಮಾರಧಾರ ಕಿಂಡಿಅಣೆಕಟ್ಟು ಬೇಡಿಕೆ

 ಕುಮಾರಧಾರ ನದಿ
ಕುಮಾರಧಾರ ನದಿ
Published on
ಕಡಬ: ಬೇಸಗೆಯಲ್ಲಿ ಕೃಷಿ ತೋಟಗಳಿಗೆ ನೀರುಣಿಸಲು ಮತ್ತು ಕಡಬ ಪರಿಸರಕ್ಕೆ ಕುಡಿಯುವ ನೀರು ಪೂರೈಸಲು ಅನುಕೂಲವಾಗುವಂತೆ ಕುಮಾರಧಾರ ನದಿಗೆ ಕಡಬದ ಮೂರಾಜೆ ಅಥವಾ ಪಿಜಕಳ ಭಾಗದಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಬೇಕೆನ್ನುವ ಬೇಡಿಕೆ ಇನ್ನೂ ಈಡೇರಿಲ್ಲ.
ಹಲವು ವರ್ಷಗಳಿಂದ ಈ ಭಾಗದ ಜನರು ಕಿಂಡಿಅಣೆಕಟ್ಟು ನಿರ್ಮಿಸುವಂತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡುತ್ತಲೇ ಇದ್ದಾರೆ. ಬೇಸಿಗೆಯಲ್ಲಿ ಎಲ್ಲೆಡೆ ನೀರಿನ ಅಭಾವ ತಲೆದೋರುತ್ತದೆ. ಕೃಷಿಗೆ ನೀರುಣಿಸುವುದಕ್ಕೂ ನೀರಿನ ಕೊರತೆ ಬಾಧಿಸುತ್ತದೆ. ನದಿಗೆ ಕಿಂಡಿಅಣೆಕಟ್ಟು ನಿರ್ಮಿಸಿದರೆ ಕೃಷಿಗೆ ನೀರು ದೊರೆಯುವುದರೊಂದಿಗೆ ಕುಡಿಯುವ ಉದ್ದೇಶಕ್ಕೂ ಬಳಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಬಿರು ಬಿಸಿಲಿನಲ್ಲಿಯೂ ಸಮೃದ್ಧಜಲದೊಂದಿಗೆ ಜಿಲ್ಲೆಯ ಜನರಿಗೆ ನೀರುಣಿಸುವ ಕುಮಾರಧಾರ ನದಿಗೆ ಕಡಬದ ಮೂರಾಜೆ ಅಥವಾ ಪಿಜಕಳ ಭಾಗದಲ್ಲಿ ಅಣೆಕಟ್ಟು ನಿರ್ಮಿಸಿದರೆ ಕಡಬ ಮತ್ತು ಎಡಮಂಗಲ ಗ್ರಾಮಗಳ ಹಲವು ಪ್ರದೇಶಗಳಿಗೆ ಅನುಕೂಲವಾಗಲಿದೆ. ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನರಿಗೂ ಇದರಿಂದ ಕುಡಿಯುವ ನೀರು ಪೂರೈಸಬಹುದಾಗಿದೆ.

ಜಲಸಂಪತ್ತು ಬಳಕೆ ಅನಿವಾರ್ಯ

ಎಲ್ಲೆಡೆ ಕುಡಿಯುವ ನೀರಿಗಾಗಿ ಕೊರೆಸಿದ ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗುತ್ತಿರುವುದು ಮತ್ತು ಹೊಸದಾಗಿ ಕೊರೆಯುವ ಕೊಳವೆಬಾವಿಗಳಲ್ಲಿ ನೀರು ಸಿಗದ ಕಾರಣ ಕುಡಿಯುವ ನೀರಿಗಾಗಿ ನದಿ ನೀರನ್ನು ಬಳಸುವ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಕೂಡ ಬಹು ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಹಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಅದರ ಜತೆಗೆ ನದಿಗಳಿಗೆ ಅಲ್ಲಲ್ಲಿ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸಿದರೆ, ಸಮುದ್ರಕ್ಕೆ ಹರಿದುಹೋಗಿ ವ್ಯರ್ಥವಾಗುವ ಜಲಸಂಪತ್ತನ್ನು ಹಿಡಿದಿಟ್ಟುಕೊಂಡು ಕೃಷಿಗೆ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಸುಬಹುದು. ಅದರ ಜತೆಗೆ ಪರಿಸರದ ಕೆರೆ, ಬಾವಿ ಹಾಗೂ ಇತರ ಜಲಮೂಲಗಳಲ್ಲಿ ಅಂತರ್ಜಲ ಮಟ್ಟ ಏರಲೂ ಸಾಧ್ಯವಾಗುತ್ತದೆ.

ಕಡಬದ ಪಿಜಕಳ ಅಥವಾ ಮೂರಾಜೆ ಭಾಗದಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಬೇಕೆಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಮನವಿ ಸ್ವೀಕರಿಸಿದ ಅವರು ಸಂಬಂಧಪಟ್ಟ ಇಲಾಖೆಯೊಂದಿಗೆ ವ್ಯವಹರಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಯಾವುದೇ ಪ್ರಗತಿ ಕಂಡುಬಂದಿಲ್ಲ. ಕಿಂಡಿಅಣೆಕಟ್ಟು ನಿರ್ಮಾಣವಾದರೆ ಕೃಷಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net