ಉಳಾಯಿಬೆಟ್ಟು ಕಿರು ಸೇತುವೆ ಕಾಮಗಾರಿ ಮಳೆಗಾಲದ ಮುನ್ನ ಮುಗಿಯದಿದ್ದರೆ ಸಂಚಾರ ಕಟ್!

ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯ ಹೊಸ ಸೇತುವೆ ಹತ್ತಿರ ನಿರ್ಮಿಸುತ್ತಿರುವ ಕಿರು ಸೇತುವೆ ಕಾಮಗಾರಿ.
ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯ ಹೊಸ ಸೇತುವೆ ಹತ್ತಿರ ನಿರ್ಮಿಸುತ್ತಿರುವ ಕಿರು ಸೇತುವೆ ಕಾಮಗಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲ ಮುಂಚಿತವಾಗಿ ಕಾಮಗಾರಿ ಪೂರ್ಣಕ್ಕೆ ಒತ್ತಾಯ
  • ಸಾರ್ವಜನಿಕರಿಗೆ ತೊಂದರೆ
ಧನಂಜಯ ಗುರುಪುರ
ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯ ಹೊಸ ಸೇತುವೆ ಹತ್ತಿರ ನಿರ್ಮಿಸುತ್ತಿರುವ ಕಿರು ಸೇತುವೆ ಕಾಮಗಾರಿ ಮಳೆಗಾಲಕ್ಕೆ ಮುಂಚಿತವಾಗಿ ಮುಗಿದರೆ ಉತ್ತಮ. ಇಲ್ಲವಾದಲ್ಲಿ ಈ ಭಾಗದ ಸಾರ್ವಜನಿಕರು ಮತ್ತೊಂದು ಮಳೆಗಾಲದಲ್ಲೂ ಸಂಚಾರ ಸಂಕಷ್ಟಕ್ಕೀಡಾದರೆ ಅಚ್ಚರಿಪಡಬೇಕಿಲ್ಲ.
ರಾಷ್ಟ್ರೀಯ ಹೆದ್ದಾರಿ 169ಕ್ಕೆರಿಂದ ಪರಾರಿ ಭಾಗದಲ್ಲಿ ಉಳಾಯಿಬೆಟ್ಟು ಮೂಲಕ ಬೆಂನಪದವು- ಬಿ.ಸಿ.ರೋಡ್‌ಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿದ್ದ ಹಳೆಯ ಕಿರು ಸೇತುವೆ ಶಿಥಿಲಗೊಂಡಿದ್ದ ಕಾರಣಕ್ಕೆ ತೆರವುಗೊಳಿಸಿ, ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಪೊಳಲಿ ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾದ ಸಂದರ್ಭದಲ್ಲೇ ಉಳಾಯಿಬೆಟ್ಟು ಕಿರು ಸೇತುವೆಯನ್ನೂ ಮುಚ್ಚಲಾಗಿತ್ತು. ಶಿಥಿಲಗೊಂಡಿದೆ ಎಂದು ಮುಚ್ಚಲಾಗಿದ್ದ ಪೊಳಲಿ ಸೇತುವೆ ಪಿಲ್ಲರ್‌ಗಳ ದುರಸ್ತಿ ಕಾರ್ಯ ನಡೆದಿದ್ದರೂ, ಕುಸಿತದ ಹಂತದಲ್ಲಿದೆ ಎಂದು ಮುಚ್ಚಲಾದ ಉಳಾಯಿಬೆಟ್ಟು ಕಿರು ಸೇತುವೆಯಲ್ಲಿ ದುರಸ್ತಿ ಕಾರ್ಯ ನಡೆಸದೆ ಪುನಃ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು!
ಲೋಕೋಪಯೋಗಿ ಇಲಾಖೆ (ಪಿಡಬ್ಲುೃಡಿ) 4 ತಿಂಗಳ ಹಿಂದೆ ಹಳೇ ಕಿರು ಸೇತುವೆ ನೆಲಸಮಗೊಳಿಸಿ, ಹೊಸ ಸೇತುವೆ ಕಾಮಗಾರಿ ಆರಂಭಿಸಿದೆ. ಆರಂಭದ ಮೂರು ತಿಂಗಳು ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಈಗಷ್ಟೇ ತರಾತುರಿಯಲ್ಲಿ ನಡೆಯುತ್ತಿದೆ. ಇನ್ನೂ 2 ತಿಂಗಳವರೆಗೆ ಕಾಮಗಾರಿ ಮುಂದುವರಿಯಲಿದೆ. ಅದಕ್ಕಿಂತ ಮುಂಚಿತವಾಗಿ ಮಳೆ ಆರಂಭವಾದರೆ ಸಾರ್ವಜನಿಕರು ಮತ್ತೆ ಸಂಕಷ್ಟಕ್ಕೀಡಾಗಬೇಕಾಗುತ್ತದೆ ಎಂಬುದು ವಿಧಿತ. 

ತಾತ್ಕಾಲಿಕ ರಸ್ತೆ

ಸೇತುವೆ ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ಸ್ಥಳೀಯ ಭೂಮಾಲೀಕರು ತಮ್ಮ ಗದ್ದೆ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ರಸ್ತೆ ಮೂಲಕ ಸರ್ಕಾರಿ ಬಸ್‌ಗಳು, ಶಾಲಾ ಬಸ್‌ಗಳು ಹಾಗೂ ಇತರ ವಾಹನಗಳು ಉಳಾಯಿಬೆಟ್ಟು-ಪೆರ್ಮಂಕಿಯತ್ತ ಸಂಚರಿಸುತ್ತಿವೆ. ಮಳೆಗಾಲಕ್ಕೆ ಮುಂಚಿತವಾಗಿ ಕಿರು ಸೇತುವೆ ಕಾಮಗಾರಿ ಮುಗಿಯಬೇಕಿದ್ದು, ಒಂದೊಮ್ಮೆ ಕಾಮಗಾರಿ ಮುಗಿಯದೆ ಹೋದಲ್ಲಿ ಸದ್ಯ ಗದ್ದೆ ಪ್ರದೇಶದಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆ ಬಂದ್ ಮಾಡಬೇಕಾಗುತ್ತದೆ.

ಸರ್ಕಾರಕ್ಕೆ ಮನವಿ

ಕಾಮಗಾರಿ ವೇಗ ಹಚ್ಚಿದಷ್ಟು ಉತ್ತಮ. ಮಳೆ ಬಂದರೆ ಕಾಮಗಾರಿ ನಡೆಸಬಹುದಾದರೂ, ಈ ಭಾಗದ ಸಾರ್ವಜನಿಕರಿಗೆ ರಸ್ತೆ ಇಲ್ಲದಂತಾಗಲಿದೆ. ಮಳೆಗಾಲದಲ್ಲಿ ಗದ್ದೆ ಪ್ರದೇಶದಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆ ಸಹಜವಾಗಿಯೇ ಮುಚ್ಚಬೇಕಾಗುತ್ತದೆ. ಆದ್ದರಿಂದ ಆದಷ್ಟು ಶೀಘ್ರ ಕಾಮಗಾರಿ ನಡೆಸಿ, ಮಳೆಗಾಲಕ್ಕಿಂತ ಮುಂಚಿತವಾಗಿ ಸೇತುವೆ ಲೋಕಾರ್ಪಣೆಗೊಂಡರೆ ಉತ್ತಮ ಎಂದು ಉಳಾಯಿಬೆಟ್ಟು, ಪೆರ್ಮಂಕಿ ಭಾಗದ ನಾಗರಿಕರು ಪಂಚಾಯಿತಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಉಳಾಯಿಬೆಟ್ಟಿನಲ್ಲಿ ಭಂಡಾರ್ಕರ್ ಕನ್‌ಸ್ಟ್ರಕ್ಷನ್ ಕಂಪನಿ ಪಿಡಬ್ಲುೃಡಿಯ 4.95 ಕೋಟಿ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣಗೊಳ್ಳುತ್ತಿದೆ. ಮಧ್ಯೆ ಯಾವುದೇ ಪಿಲ್ಲರ್ ಇಲ್ಲದ ಕಿರು ಸೇತುವೆ ಇದಾಗಿದ್ದು, ಎರಡೂ ಪಾರ್ಶ್ವಗಳಲ್ಲಿ ನಿರ್ಮಿಸಲಾದ ಅಬೆಟ್ಮೆಂಟ್ ಪಿಲ್ಲರ್‌ಗಳಿಗೆ 5 ಗರ್ಡರ್ ಜೋಡಿಸಿ ಸಂಪರ್ಕ ಕಲ್ಪಿಸಲಾಗುತ್ತದೆ. ಮುಂದಿನ 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸೇತುವೆ ಲೋಕಾರ್ಪಣೆಗೊಳ್ಳಬೇಕಿದೆ. ಗರ್ಡರ್ ಅಳವಡಿಸಲಾದ ನಂತರ ಸೇತುವೆ ಮೇಲ್ಭಾಗದಲ್ಲಿ ಉದ್ದಕ್ಕೂ ತಡೆಗೋಡೆ ನಿರ್ಮಿಸಬೇಕಿದೆ.

— ಸುನೀಲ್, ಕಂಪನಿ ಇಂಜಿನಿಯರ್

ಈವರೆಗೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದ್ದರೂ, ಈ ಬಾರಿ ಮಳೆಗಾಲಕ್ಕೆ ಮುಂಚಿತವಾಗಿ ಕಿರು ಸೇತುವೆ ಲೋಕಾರ್ಪಣೆಗೊಂಡರೆ ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು ಮೂಲಕ ಬೆಂಜನಪದವು ಬಿ.ಸಿ.ರೋಡ್‌ನತ್ತ ವಾಹನ ಸಂಚಾರ ಸುಗಮವಾಗಲಿದೆ. ಇಲ್ಲವಾದಲ್ಲಿ ಗದ್ದೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ರಸ್ತೆ ಮಳೆಗಾಲದಲ್ಲಿ ಮುಚ್ಚಲಾಗುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ.

— ಹರಿಕೇಶ ಶೆಟ್ಟಿ ನಡಿಗುತ್ತು, ನಿಕಟಪೂರ್ವ ಅಧ್ಯಕ್ಷ, ಉಳಾಯಿಬೆಟ್ಟು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net