ಯುಜಿಡಿ ಯೋಜನೆ ನನೆಗುದಿಗೆ

36 ಸಮಸ್ಯೆಗಳಿಗೆ ಕಾಲಮಿತಿಯ ಪರಿಹಾರ
ಮೂಡುಬಿದಿರೆಯಲ್ಲಿ ಕಾಣಿಸಿಕೊಂಡಿರುವ ಕೊಳಚೆ ಸಮಸ್ಯೆ
ಮೂಡುಬಿದಿರೆಯಲ್ಲಿ ಕಾಣಿಸಿಕೊಂಡಿರುವ ಕೊಳಚೆ ಸಮಸ್ಯೆ
Published on: 

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ವೇಗವಾಗಿ ಬೆಳೆಯುತ್ತಿರುವ ಮೂಡುಬಿದಿರೆಗೆ ಅಂಡರ್‌ಗ್ರೌಂಡ್ ಡ್ರೈನೇಜ್(ಯುಜಿಡಿ) ಸೇರಿದಂತೆ ಸಮಗ್ರ ಮೂಲಸೌಕರ್ಯ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಮ್ಮ ಮೂಡುಬಿದಿರೆ ಫೋರಂ ಆಗ್ರಹಿಸಿದೆ. ಫೋರಂ ಪಟ್ಟಣದ 36 ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದೆ.

ಒಳಚರಂಡಿಗೆ ಆದ್ಯತೆ

ಜೈನ ಕಾಶಿ, ಪ್ರಮುಖ ಶೈಕ್ಷಣಿಕ ಕೇಂದ್ರವಾಗಿರುವ ಮೂಡುಬಿದಿರೆಯನ್ನು ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಸಿಬ್ಬಂದಿ, ಕಾರ್ಮಿಕರು, ಉದ್ಯಮಿಗಳು, ಸಾರ್ವಜನಿಕರು ಅವಲಂಬಿಸಿದ್ದಾರೆ. ಪಟ್ಟಣದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ ಎಂದು ಫೋರಂ ಹೇಳಿದೆ.

ಯುಜಿಡಿ ಐಷಾರಾಮಿ ಸೌಲಭ್ಯವಲ್ಲ

ಸ್ವಚ್ಛತೆ, ಆರೋಗ್ಯ, ಪರಿಸರ ಹಾಗೂ ಯೋಜಿತ ನಗರಾಭಿವೃದ್ಧಿಗೆ ಅಗತ್ಯವಾದ ಮೂಲ ವ್ಯವಸ್ಥೆಯಾಗಿದೆ. ಯುಜಿಡಿ ಕೊರತೆಯಿಂದ ಅಪಾರ್ಟ್‌ಮೆಂಟ್, ವಸತಿ ಯೋಜನೆ, ಹೂಡಿಕೆ, ಇತರ ಅಭಿವೃದ್ಧಿ ಅವಕಾಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

36 ಸಮಸ್ಯೆಗಳ ಪಟ್ಟಿ

ಸಂಚಾರ, ಪಾರ್ಕಿಂಗ್, ರಸ್ತೆ, ಫುಟ್‌ಪಾತ್, ಒಳಚರಂಡಿ, ತ್ಯಾಜ್ಯ ನೀರು, ಅಕ್ರಮ ರಸ್ತೆಬದಿ ಅಂಗಡಿ, ಒತ್ತುವರಿ, ಸಾರ್ವಜನಿಕ ಸಾರಿಗೆ, ಭಾರೀ ವಾಹನಗಳ ಸಂಚಾರ, ರಸ್ತೆ ಸುರಕ್ಷತೆ, ಯೋಜಿತ ಅಭಿವೃದ್ಧಿಯ ಕೊರತೆ ಸೇರಿದಂತೆ 36 ಸಮಸ್ಯೆಗಳನ್ನು ಗುರುತಿಸಲಾಗಿದೆ. ಹಲವು ಸಮಸ್ಯೆಗಳು ವರ್ಷಗಳಿಂದ, ಕೆಲವು ದಶಕಗಳಿಂದ ಮುಂದುವರಿದಿವೆ.

2030 ವರ್ಷಗಳ ಯೋಜನೆ

ಸಮಗ್ರ ಒಳಚರಂಡಿ ಯೋಜನೆಯನ್ನು ತಕ್ಷಣ ರೂಪಿಸಿ ಜಾರಿಗೊಳಿಸುವುದರ ಜತೆಗೆ ಮುಂದಿನ 2030 ವರ್ಷಗಳ ಅಗತ್ಯ ಗಮನದಲ್ಲಿಟ್ಟುಕೊಂಡು ದೀರ್ಘಕಾಲೀನ ಅಭಿವೃದ್ಧಿ ಯೋಜನೆ ರೂಪಿಸಬೇಕು. 36 ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಿ ಸರ್ಕಾರಿ ಇಲಾಖೆಗಳ ಸಮನ್ವಯದೊಂದಿಗೆ ಅಭಿವೃದ್ಧಿ ಪರಿಶೀಲನಾ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು ಎಂದು ಫೋರಂ ಒತ್ತಾಯಿಸಿದೆ.

ನಾವು ಉಪಕಾರ ಕೇಳುತ್ತಿಲ್ಲ. ನಮ್ಮ ಊರಿನ ಅಭಿವೃದ್ಧಿಗೆ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಮೂಡುಬಿದಿರೆಗೆ ಗಮನ, ಯೋಜನೆ, ಜವಾಬ್ದಾರಿ, ತಕ್ಷಣದ ಕ್ರಮ ಬೇಕು.
ಅಕ್ಷಯ್ ಕೆ.ಜೈನ್, ನಮ್ಮ ಮೂಡುಬಿದಿರೆ ಫೋರಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net