ಮೂಡುಬಿದಿರೆ: ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಸಂಪಿಗೆ ಎಂಬಲ್ಲಿ ಗುರುವಾರ ಮಧ್ಯಾಹ್ನ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿದ್ದು ವಿದ್ಯಾರ್ಥಿನಿಯೊಬ್ಬರು ಗಾಯಗೊಂಡಿದ್ದಾರೆ.
ಕಿನ್ನಿಗೋಳಿಯಿಂದ ಮೂಡುಬಿದಿರೆ ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರು ಹಾಗೂ ಉಜಿರೆಯಿಂದ ಕಟೀಲು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಅಪಘಾತ ನಡೆದಿದ್ದು, ಉಜಿರೆ ಮೂಲದ ವಿದ್ಯಾರ್ಥಿನಿ ಅಶ್ವಿತಾ ಎಂಬುವರು ಗಾಯಗೊಂಡಿದ್ದಾರೆ. ಎರಡೂ ಕಾರಿನಲ್ಲಿದ್ದ ಇತರ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.
ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯಿಂದ ಎದ್ದ ವಿಪರೀತ ಧೂಳು ಮತ್ತು ದಟ್ಟವಾದ ಹೊಗೆಯಿಂದ ರಸ್ತೆ ಸರಿಯಾಗಿ ಕಾಣಿಸದ ಕಾರಣ ಈ ಅವಘಡ ಸಂಭವಿಸಿದೆ. ದಿನವೊಂದಕ್ಕೆ 200ಕ್ಕೂ ಅಧಿಕ ಲೋಡ್ ಮಣ್ಣು ಸಾಗಿಸಲಾಗುತ್ತದೆ. ಬೇಕಾಬಿಟ್ಟಿ ಸಾಗಾಟ ಮಾಡುತ್ತಿರುವುದರಿಂದ ಗ್ರಾಮಸ್ಥರು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.