ಮಂಗಳೂರು: ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಸ್ಕೂಟರ್ ನಲ್ಲಿ ಸಾಗುತ್ತಿದ್ದ ಇಬ್ಬರನ್ನು ಪೊಳಲಿ ದ್ವಾರದ ಬಳಿ ಬಜಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 1ಕೆಜಿ 124 ಗ್ರಾಂ ತೂಕದ 65 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕು ಕಲ್ಲಿಗೆ ಗ್ರಾಮ ಬೆಂಜನ ಪದವು ಕರಾವಳಿ ಸೈಟ್ ಹೌಸ್ ನಿವಾಸಿಗಳಾದ ರಕ್ಷಿತ್ (23) ಮತ್ತು ಅಕ್ಷಯ್ ಬಿ. (23) ಬಂಧಿತ ಆರೋಪಿಗಳು.
ಬಜಪೆ ಠಾಣೆ ಪೊಲೀಸರು ಆ.15ರಂದು ಸಂಜೆ 4 ಗಂಟೆ ವೇಳೆಗೆ ಪೊಳಲಿ ದ್ವಾರದ ಬಳಿ ರಸ್ತೆ ಬದಿಯಲ್ಲಿ ವಾಹನ ತಪಾಸಣೆ ಕೈಗೊಳ್ಳುತ್ತಿದ್ದಾಗ ಕೈಕಂಬ ಕಡೆಯಿಂದ ಬಂದ ಸ್ಕೂಟರ್ ಸವಾರರು ತಪ್ಪಿಕೊಳ್ಳಲು ಯತ್ನಿಸಿದ್ದಾರೆ. ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ ಮಾರಿಪಳ್ಳದ ಶಾಕೀರ್ ಎಂಬವನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ, ಅದನ್ನು ಸ್ಕೂಟರ್ ನ ಡಿಕ್ಕಿಯಲ್ಲಿ ಇರಿಸಿ ಮಾರಾಟ ಮಾಡುವ ಉದ್ದೇಶದಿಂದ ಗುರುಪುರ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಬಳಿ ಪ್ಲಾಸ್ಟಿಕ್ ಕವರ್ ನಲ್ಲಿ ಸುಮಾರು 60 ಸಾವಿರ ರೂ. ಮೌಲ್ಯದ 1,107 ಗ್ರಾಂ ತೂಕದ ಗಾಂಜಾ ಮತ್ತು ಸಣ್ಣ ಜಿಪ್ ಲಾಕ್ ಕವರ್ ಗಳಲ್ಲಿ ತುಂಬಿಸಿದ್ದ ಸುಮಾರು 5 ಸಾವಿರ ರೂ. ಮೌಲ್ಯದ 107 ಗ್ರಾಂ. ಗಾಂಜಾ ಪತ್ತೆಯಾಗಿದೆ. ಅಲ್ಲದೆ 500 ರೂ. ಮೌಲ್ಯದ ಬ್ಯಾಟರಿ ಚಾಲಿತ ಡಿಜಿಟಲ್ ತೂಕ ಮಾಪಕ, ಜಿಪ್ ಲಾಕ್ ಕವರ್ ಗಳು, 20 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್ ಗಳು, 80 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.