ಮಾದಕವಸ್ತು ಮಾರಾಟ ಪ್ರಕರಣ ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉರ್ವ ಮತ್ತು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಡಿಕಲ್ ಫಲ್ಗುಣಿ ನಗರದ ಪಂಪ್ ಹೌಸ್ ಬಳಿ ಕೇರಳ ನೋಂದಣಿಯ ಸ್ಕೂಟರ್‌ನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಯುವಕನೊಬ್ಬನನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಮಲಪುರಂ ಕೊಟ್ಟಕ್ಕಲ್ ನಿವಾಸಿ ಶಾಯಿನ್ ಸಿ. (26) ಬಂಧಿತ ಆರೋಪಿ. ಆ.26ರಂದು ಸಂಜೆ 6.45ರ ವೇಳೆಗೆ ಫಲ್ಗುಣಿ ನಗರದ ಪಂಪ್ ಹೌಸ್ ಬಳಿ ನಿಂತಿದ್ದ ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತಾನು ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಬಂದಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ 39 ಗ್ರಾಂ. ತೂಕದ, ಅಂದಾಜು 1,950 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜತೆಗೆ 2,500 ರೂ. ನಗದು, 15,000 ರೂ. ಮೌಲ್ಯದ ಮೊಬೈಲ್ ಮತ್ತು 70 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಉರ್ವ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉಳ್ಳಾಲ ಮುಕ್ಕಚೇರಿಯ ಸೀ ಗ್ರೌಂಡ್ ನ ಬಳಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಬಂದಿದ್ದ ಆರೋಪದಲ್ಲಿ ಯುವಕನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ನಿಜಾಮುದ್ದೀನ್ ಫೈರೋಜ್ ಬಂಧಿತ ಆರೋಪಿ. ಖಚಿತ ಮಾಹಿತಿಯಂತೆ ಆ.26ರಂದು ಮಧ್ಯಾಹ್ನ 2.35ರ ವೇಳೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ 50,000 ರೂ. ಮೌಲ್ಯದ 5.08 ಗ್ರಾಂ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ 10 ಸಾವಿರ ರೂ. ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ನವಾಜ್ ಮುಡಿಪು ಎಂಬಾತ ನೀಡಿದ ಎಂಡಿಎಂಎ ಮಾರಾಟಕ್ಕೆ ತಂದಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಆರೋಪಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net