ಮಂಗಳೂರು : ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳವಾರದಂದು ನಗರದ ಉರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ರಾಮನಗರದ ಸೈಯದ್ ಕಲಿಮುಲ್ಲಾ (31) ಮತ್ತು ಮಂಜೇಶ್ವರ ಮಂಗಲ್ಪಾಡಿಯ ಅಶ್ರಫ್ ಆಲಿ (26) ಬಂಧಿತ ಆರೋಪಿಗಳು.
ಉರ್ವ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಗುರಪ್ಪ ಕಂಠಿ ಅವರು ಸಿಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿ ಮಧ್ಯಾಹ್ನ 11.55 ವೇಳೆಗೆ ರಾಷ್ಟ್ರೀಯ ಹೆದ್ದಾರಿ 66 ಕಡೆಯಿಂದ ಬಾರೆಬೈಲ್ ಕಡೆಗೆ ಹೋಗುತ್ತಿದ್ದಾಗ ಬಾರೆಬೈಲ್ ಕಡೆಯಿಂದ ಇಬ್ಬರು ಯುವಕರು ಸಂಶಯ ಬರುವ ರೀತಿಯಲ್ಲಿ ರಸ್ತೆಯ ಬಲಬದಿಯಿಂದ ರಾಷ್ಟ್ರೀಯ ಹೆದ್ದಾರಿ 66 ರಕಡೆಗೆ ಹೋಗುತ್ತಿದ್ದರು. ಅವರನ್ನು ನಿಲ್ಲಿಸಿ ಕೂಲಂಕಷವಾಗಿ ವಿಚಾರಿಸಿದಾಗ ಅವರು ತಮ್ಮ ಪರಿಚಯದ ಕುದ್ರೋಳಿಯ ಪಹಾದ್ ಎಂಬಾತನಿಂದ ಕಡಿಮೆ ಹಣಕ್ಕೆ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿ ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ.
ಸೈಯದ್ ಖಾಲಿಮುಲ್ಲನ ವಶದಿಂದ ಅಂದಾಜು 25,000 ರೂ. ಮೌಲ್ಯದ 12.27 ಗ್ರಾಂ ಎಂಡಿಎಂಎ ಮತ್ತು ಅಂದಾಜು 7,000 ರೂ. ಮೌಲ್ಯದ ಮೊಬೈಲ್ ಫೋನ್, ಅಶ್ರಫ್ ಆಲಿ ವಶದಿಂದ ಅಂದಾಜು 12,500 ರೂ. ಮೌಲ್ಯದ 6.18 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಮೊಬೈಲ್ ಪೋನ್ ಸ್ವಾಧೀನಪಡಿಸಿಕೊಳ್ಳಲಾಗಿದೆ.