ಮಾದಕವಸ್ತು ಎಂಡಿಎಂಎ ಮಾರಾಟ ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ವರ್ಕಾಡಿಯ ಮೊಹಮ್ಮದ್ ಇರ್ಷಾದ್ (30) ಮತ್ತು ಕೇರಳ ಕಣ್ಣೂರಿನವನಾಗಿದ್ದು ಮಂಗಳೂರಿನ ಕೊಂಚಾಡಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ನಿತಿನ್ ಕೃಷ್ಣನ್ (27) ಬಂಧಿತ ಆರೋಪಿಗಳು. ಆರೋಪಿಗಳಿಂದ 1.36 ಲಕ್ಷ ರೂ. ಮೌಲ್ಯದ 13.69 ಗ್ರಾಂ ಎಂಡಿಎಂಎ ಮತ್ತು ಅಂದಾಜು 60,000 ರೂ. ಮೌಲ್ಯದ 1.206 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ -1

ಮಂಗಳವಾರದಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್ ವೆಲ್ ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆಯ ಬದಿಯಲ್ಲಿ ಸುಮಾರು 30–35 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಆಟೋ ರಿಕ್ಷಾದಲ್ಲಿ ಎಂಡಿಎಂಎ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಮೊಹಮ್ಮದ್ ಇರ್ಷಾದ್ ನನ್ನು ಬಂಧಿಸಿ ಅತನ ವಶದಲ್ಲಿದ್ದ 1,36,000 ರೂ. ಮೌಲ್ಯದ 13.69 ಗ್ರಾಂ ಎಂಡಿಎಂಎ, ನಗದು ಹಣ, ಆಟೋರಿಕ್ಷಾ ಸಹಿತ ಒಟ್ಟು ಅಂದಾಜು 2,94,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣ–2

ಸೋಮವಾರದಂದು ಗಾಂಜಾ ಸೇವನೆ ಮಾಡಿದ ಪ್ರಕರಣದಲ್ಲಿ ಆರೋಪಿ ಆಶ್ವಿನ್ ಕ್ಸೇವಿಯರ್ (24) ಎಂಬಾತನನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ನಿತಿನ್ ಕೃಷ್ಣನ್ ಎಂಬಾತನನ್ನು ತೋರಿಸಿಕೊಡುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಕದ್ರಿಯ ಆಯುರ್ವೇದ ಕ್ಲಿನಿಕ್ ವೊಂದರಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ನಿತಿನ್ ಕೃಷ್ಣನ್ (27) ಎಂಬಾತನನ್ನು ಪತ್ತೆಹಚ್ಚಿ ಆತನ ವಶದಲ್ಲಿದ್ದ 60,000 ರೂ. ಮೌಲ್ಯದ 1 ಕೆ.ಜಿ. 206 ಗ್ರಾಂ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಕೆಟಿಎಂ ಬೈಕ್ ಮತ್ತು ಆರೋಪಿಯ ಮೊಬೈಲ್ ಫೋನ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಿತಿನ್ ಕೃಷ್ಣನ್ ಕೇರಳ ಕಣ್ಣೂರಿನವನಾಗಿದ್ದು ಮಂಗಳೂರಿನ ಕೊಂಚಾಡಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net