ಮಂಗಳೂರು: ಬಜಪೆ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಶರೀಫ್ ಎಂಬವರ ಮನೆಯಿಂದ 23 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.25 ಲಕ್ಷ ರೂ. ನಗದು ಕಳವುಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳವಾರು ಚರ್ಚ್ ಬಳಿಯ ನಿವಾಸಿ ಅಬ್ದುಲ್ ನಾಸಿರ್ ಯಾನೆ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಬಂಧಿತರು. 2025 ಸೆ.23ರಂದು ಶರೀಫ್ ಮನೆಯವರು ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ಮನೆಯಲ್ಲಿದ್ದ 23 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ. 1.25 ಲಕ್ಷ ನಗದು ಕಳವಾಗಿತ್ತು.
ಆರೋಪಿ ಕಳ್ಳತನಗೈದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ. ಪೊಲೀಸರು ಲುಕೌಟ್ ನೊಟೀಸ್ ಹೊರಡಿಸಿ ಆತನನ್ನು ಬಂಧಿಸಿದ್ದಾರೆ. ವಿಚಾರಣೆಗೊಳಪಡಿಸಿದಾಗ ಶರೀಫ್ ಅವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿತರಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/ ರೂ. ನಗದು, ಸುಮಾರು 50,000/- ರೂಪಾಯಿ ಮೌಲ್ಯದ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.