ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಬೇಕು

ಎಂಎಲ್‌ಸಿ ಐವನ್ ಡಿಸೋಜಾ
ಎಂಎಲ್‌ಸಿ ಐವನ್ ಡಿಸೋಜಾ
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಐವನ್ ಡಿಸೋಜಾ ಹೇಳಿಕೆ
ಮಂಗಳೂರು: ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಸರ್ವಾನುಮತದ ನಿರ್ಣಯ ಕೈಗೊಂಡು ಕೇಂದ್ರ ಗೃಹ ಇಲಾಖೆಗೆ 2013ರಲ್ಲೇ ಪತ್ರ ಬರೆಯಲಾಗಿತ್ತು. ರಾಜ್ಯ ಸರ್ಕಾರ ಮತ್ತೊಮ್ಮೆ ನಿರ್ಣಯ ಮಾಡಿ ಕಳುಹಿಸಲೂ ಸಿದ್ಧವಿದೆ. ಬಿಜೆಪಿ ಸಂಸದರು ಇದನ್ನು ಸವಾಲಾಗಿ ತೆಗೆದುಕೊಂಡು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಿಷತ್ ಸದಸ್ಯನಾಗಿ 2014ರಲ್ಲಿ ತುಳುವಿನ ಬಗ್ಗೆ ಮೊದಲ ಬಾರಿಗೆ ಸದನದಲ್ಲಿ ಪ್ರಶ್ನೆ ಕೇಳುವ ಮೂಲಕ ಧ್ವನಿ ಎತ್ತಿದ್ದೆ. ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುವನ್ನು ಘೋಷಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಮುಂದಕ್ಕೆ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯ ಸಂಸದರು, ಶಾಸಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಸಚಿವ ಸಂಪುಟ ಸಭೆಯಲ್ಲಿ 32,611 ಕೋ.ರೂ. ಮೊತ್ತದ ಅನುದಾನವನ್ನು ಕರಾವಳಿಗೆ ನೀಡಿದೆ. ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆ ಮಾಡಿತ್ತು. ನಾವು ಅಭಿವೃದ್ಧಿಯ ಪ್ರಯೋಗ ಶಾಲೆ ಮಾಡುತ್ತೇವೆ. ರಸ್ತೆ ಅಭಿವೃದ್ಧಿ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಗೆ 660 ಕೋ.ರೂ. ಅನುದಾನ ಕೊಟ್ಟಿದ್ದಾರೆ. ಕರಾವಳಿಯಲ್ಲಿ ಹೈಕೋರ್ಟ್ ಪೀಠಕ್ಕೆ ಸಂಬಂಧಿಸಿದ ವಿಚಾರ ಚರ್ಚೆಗೆ ಬಂದಿಲ್ಲ. ಆದರೆ ಈ ವಿಚಾರ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಮಂಗಳೂರು ಜಿಲ್ಲೆ ನಾಮಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ ಎಂದರು.
ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಬಿ. ಸಾಲ್ಯಾನ್, ಅಪ್ಪಿ ಎಸ್., ಭಾಸ್ಕರ ರಾವ್, ನಾಗೇಂದ್ರ ಕುಮಾರ್, ಸತೀಶ್ ಪೆಂಗಳ್, ಚೇತನ್ ಕುಮಾರ್ ಹಾಗೂ ಮುಖಂಡರಾದ ಅಮೃತ್ ಕದ್ರಿ, ಮನೀಶ್ ಬೋಳಾರ್, ಇಮ್ರಾನ್ ಎ.ಆರ್., ವಿಲ್ಫ್ರೆಡ್, ಜೇಮ್ಸ್ ಪ್ರವೀಣ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net