

ಮಂಜೇಶ್ವರ: ಕಾಸರಗೋಡು ಜಿಲ್ಲಾ ಪಂಚಾಯಿತಿ ನಿಧಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳ್ಳುತ್ತಿರುವ ವರ್ಕಾಡಿ ಗ್ರಾಪಂ ವ್ಯಾಪ್ತಿಯ ಪೆರ್ಮನಂಜಿ-ಮುಡಿಮಾರು ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸಿ ಕಾಮಗಾರಿ ಹಾಳು ಮಾಡಿರುವ ಘಟನೆ ಬುಧವಾರ ನಡೆದಿದೆ.
ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆಯಲು ಅಳವಡಿಸಲಾಗಿದ್ದ ತಡೆಗಳನ್ನು ತೆರವುಗೊಳಿಸಿರುವ ಕಿಡಿಗೇಡಿಗಳು, ರಿಕ್ಷಾ ಹಾಗೂ ಕಾರನ್ನು ರಸ್ತೆ ಮೇಲೆಯೇ ಚಲಾಯಿಸಿದ್ದಾರೆ. ಇದರಿಂದ ಹೊಸದಾಗಿ ಹಾಕಲಾಗುತ್ತಿದ್ದ ಕಾಂಕ್ರೀಟ್ ರಸ್ತೆಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಾಲ್ಕು ದಿನಗಳಿಂದ ಈ ರಸ್ತೆಯಲ್ಲಿ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನ ಸಂಚಾರ ನಿರ್ಬಂಧಿಸಿ ಬ್ಯಾರಿಕೇಡ್, ಸೂಚನಾ ಫಲಕವ ಹಾಕಲಾಗಿತ್ತು. ಆದರೂ ಬ್ಯಾರಿಕೇಡ್ ತೆರವುಗೊಳಿಸಿ ವಾಹನ ಚಲಾಯಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಕಾಸರಗೋಡು ಜಿಪಂ ಸದಸ್ಯ ಹರ್ಷಾದ್ ವರ್ಕಾಡಿ ತಿಳಿಸಿದ್ದಾರೆ. ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಸರಗೋಡು ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ ಆಗ್ರಹಿಸಿದ್ದಾರೆ.