ಉಪಯೋಗ ಶೂನ್ಯ ತಂಗುದಾಣ

ಕೈಕಂಬ ಜಂಕ್ಷನ್‌ನಲ್ಲೇ ಬಸ್ ನಿಲುಗಡೆಯಿಂದ ಸಂಚಾರ ದಟ್ಟಣೆ
ಉಪಯೋಗ ಶೂನ್ಯ ಬಸ್ ತಂಗುದಾಣ.
ಉಪಯೋಗ ಶೂನ್ಯ ಬಸ್ ತಂಗುದಾಣ.
Published on: 

ವಿಜಯವಾಣಿ ಸುದ್ದಿಜಾಲ ಉಪ್ಪಳ

ಉಪ್ಪಳ ಕೈಕಂಬದ ಬಾಯಾರು ರಸ್ತೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್ ತಂಗುದಾಣ ಪ್ರಯಾಣಿಕರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗದೆ ನಿರುಪಯುಕ್ತವಾಗಿದೆ. ಬಾಯಾರು ಭಾಗಕ್ಕೆ ಸಂಚರಿಸುವ ಖಾಸಗಿ ಬಸ್‌ಗಳು ಸೇರಿದಂತೆ ಹಲವು ವಾಹನಗಳು ತಂಗುದಾಣದ ಮುಂದೆ ನಿಲ್ಲದೆ, ಜನನಿಬಿಡ ಕೈಕಂಬ ಜಂಕ್ಷನ್ ಹಾಗೂ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿ-ಇಳಿಸುವ ಕ್ರಮದಿಂದ ಪ್ರತಿದಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಬಾಯಾರು ಭಾಗಕ್ಕೆ ತೆರಳುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸರ್ವೀಸ್ ರಸ್ತೆಯಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ಕೈಕಂಬದಲ್ಲಿ ಇಳಿಯಬೇಕಾದ ಪ್ರಯಾಣಿಕರನ್ನು ಬಸ್ ತಂಗುದಾಣದ ಬಳಿ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಇಳಿಸುವ ಬದಲು ಜಂಕ್ಷನ್ ಸಮೀಪದ ರಸ್ತೆ ಮಧ್ಯದಲ್ಲೇ ಇಳಿಸುವುದು ಸಾಮಾನ್ಯ. ಇದರಿಂದ ವಾಹನ ಅಪಘಾತಗಳ ಆತಂಕ ಹೆಚ್ಚಿದ್ದು, ಪಾದಚಾರಿಗಳ ಜೀವಕ್ಕೂ ಅಪಾಯ ಎದುರಾಗಿದೆ.

ಪ್ರಸ್ತುತ ಬಸ್ ತಂಗುದಾಣದ ಸಮೀಪದಲ್ಲೇ ಹಿಂದೆ ನಿರ್ಮಿಸಲಾಗಿದ್ದ ಮತ್ತೊಂದು ತಂಗುದಾಣವೂ ಬಳಕೆಯಿಲ್ಲದೆ ಪೊದೆಗಳಿಂದ ಆವೃತವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳಿದ್ದರೂ, ಅವುಗಳನ್ನು ಬಳಸದೆ ಜಂಕ್ಷನ್‌ನಲ್ಲಿ ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿರುವುದನ್ನು ತಡೆಯಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕ್ರಮಕ್ಕೆ ಸ್ಥಳೀಯರ ಆಗ್ರಹ

ಪ್ರಯಾಣಿಕರು ಬಸ್ ತಂಗುದಾಣಗಳನ್ನು ಸಮರ್ಪಕವಾಗಿ ಬಳಸುವಂತೆ ವ್ಯವಸ್ಥೆ ಕಲ್ಪಿಸಬೇಕು. ರಸ್ತೆಯಲ್ಲಿ ಅವೈಜ್ಞಾನಿಕವಾಗಿ ವಾಹನಗಳನ್ನು ನಿಲ್ಲಿಸುವುದು ಹಾಗೂ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಮತ್ತು ಇಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.

ಕೈಕಂಬ ಜಂಕ್ಷನ್‌ನಲ್ಲಿ ಬಸ್‌ಗಳು ಜನರನ್ನು ಹತ್ತಿಸಿ-ಇಳಿಸುವ ಕ್ರಮ ಅನುಸರಿಸುತ್ತಿರುವುದರಿಂದ ಭಾರಿ ದಟ್ಟಣೆ ಉಂಟಾಗುತ್ತಿದೆ. ಇದು ಹಲವು ಸಂದರ್ಭ ಅವಘಡಗಳಿಗೆ, ಜಗಳಗಳಿಗೂ ಕಾರಣವಾಗುತ್ತಿದೆ. ಬಸ್‌ಗಳು ತಂಗುದಾಣದಲ್ಲೇ ನಿಲ್ಲಿಸುವ ಕ್ರಮ ಅನುಸರಿಸಿ ಸಮಸ್ಯೆಗಳಿಗೆ ಕೊನೆಹಾಡಬೇಕು.
ಗಣೇಶ್ ಕುಮಾರ್ ಸೋಂಕಾಲ್, ನಿತ್ಯ ಪ್ರಯಾಣಿಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net