ನಾಳೆ ಮಂಗಳೂರು ವಿವಿ 44ನೇ ಘಟಿಕೋತ್ಸವ

ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರ್ ಕೆ. ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವದ ಅಂಗವಾಗಿ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರ್ ಕೆ. ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವದ ಅಂಗವಾಗಿ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಗಿದೆ.
Published on
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವ ಶನಿವಾರ ಬೆಳಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.
ಶುಕ್ರವಾರ ವಿಶ್ವವಿದ್ಯಾನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್ ಭಾಗವಹಿಸಲಿದ್ದು, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವದಲ್ಲಿ 162 ಪಿಎಚ್‌ಡಿ , 56 ಚಿನ್ನದ ಪದಕಗಳು ಹಾಗೂ 57 ನಗದು ಬಹುಮಾನಗಳು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುತ್ತದೆ. ಒಟ್ಟು 147 ರ‌್ಯಾಂಕ್ ಘೋಷಿಸಲ್ಪಟ್ಟಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ದಾಖಲಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೂ ಗಮನಾರ್ಹವಾಗಿದೆ. ಈ ಬಾರಿ ತಲಾ 20 ಮಂದಿಯ ಒಂದೊಂದು ಬ್ಯಾಚ್‌ನ್ನು ಪದವಿ ಪ್ರಮಾಣ ಪತ್ರದೊಂದಿಗೆ ವೇದಿಕೆಗೆ ಆಹ್ವಾನಿಸಲಾಗುವುದು ಎಂದು ಕುಲಪತಿ ಹೇಳಿದರು.
ಈ ಬಾರಿ ಒಟ್ಟು 22,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 19,568 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಉತ್ತೀರ್ಣ ಪ್ರಮಾಣ ಶೇ.88.74 ಆಗಿದೆ. ಇವರಲ್ಲಿ 7,284 ಹುಡುಗರು, 12,284 ಹುಡುಗಿಯರು ಸೇರಿದ್ದಾರೆ. ಸ್ನಾತಕ (ಯುಜಿ) ವಿಭಾಗದಲ್ಲಿ 18,825ರಲ್ಲಿ 16,541 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 87.87 ಶೇಕಡಾ ಮತ್ತು ಸ್ನಾತಕೋತ್ತರ (ಪಿಜಿ) ವಿಭಾಗದಲ್ಲಿ 3,225ರಲ್ಲಿ 3,027 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 93.86 ಫಲಿತಾಂಶ ಬಂದಿದೆ ಎಂದು ಕುಲಪತಿ ಹೇಳಿದರು.
ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಆಡಳಿತ ಕುಲಸಚಿವ ಗಣೇಶ್ ಸಂಜೀವ್, ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ನಾಗಪ್ಪ ಗೌಡ, ಹಣಕಾಸು ಅಧಿಕಾರಿ ಪ್ರೊ.ಪಂಚಲಿಂಗ ಸ್ವಾಮಿ ಇದ್ದರು.

ಮೂವರಿಗೆ ಗೌರವ ಡಾಕ್ಟರೇಟ್

ಕಿತ್ತಳೆ ಮಾರಾಟ ಮಾಡಿ ಶಾಲೆ ನಿರ್ಮಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಇತ್ತೀಚೆಗೆ ಇಹಲೋಕ ತ್ಯಜಿಸಿದ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರ್ ಕೆ. ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ 44ನೇ ಘಟಿಕೋತ್ಸವದ ಅಂಗವಾಗಿ ಗೌರವ ಡಾಕ್ಟರೇಟ್ ಪದವಿ ಪ್ರಕಟಿಸಲಾಗಿದೆ. ಸಮಾಜ ಸೇವೆ, ಜನಪದ ಸಂಸ್ಕೃತಿ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನೀಡಿದ ವಿಶಿಷ್ಟ ಕೊಡುಗೆಗಳನ್ನು ಪರಿಗಣಿಸಿ ಈ ಮೂವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಅವರ ನಿವಾಸದಲ್ಲಿ ಏಪ್ರಿಲ್ 13 ರಂದು ಪ್ರದಾನ ಮಾಡಲಾಗುತ್ತದೆ. ಉಳಿದ ಇಬ್ಬರಾದ ಹರೇಕಳ ಹಾಜಬ್ಬ ಮತ್ತು ರವೀಶ್ ಪಡುಮಲೆ ಅವರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ವಿಶೇಷವಾಗಿ ದೈವ ನರ್ತಕರೊಬ್ಬರಿಗೆ ಮಂಗಳೂರು ವಿವಿಯಿಂದ ಇದೇ ಮೊದಲ ಬಾರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿರುವುದು ಗಮನಾರ್ಹ ಸಂಗತಿ ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net