

ಮಂಗಳೂರು: ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಒಡ್ಡಿ, ಹಣ ಸುಲಿಗೆ ಮಾಡಿದ ಆರೋಪದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಪೊಲೀಸರು ಬಂಧನಕ್ಕೊಳಗಾಗಿದ್ದಾರೆ.
ಠಾಣಾ ಸಿಬಂದಿ ಶಿವರಾಜ್, ಹೊಯ್ಸಳ ಚಾಲಕ ಹೀರಣ್ಣ ಬೆನ್ನಿ ಮತ್ತು ಉಮಾನಾಥ ಬಂಧಿತರು.
ಪಾಂಡೇಶ್ವರದ ಶಿವನಗರದಲ್ಲಿ ವಾಸವಾಗಿರುವ, ವಿಟ್ಲ ಮುಡ್ನೂರಿನ ರವಿರಾಜ್ (39) ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಬಂಧನಕ್ಕೊಳಗಾಗಿದ್ದಾರೆ.
ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದ ರವಿರಾಜ ಅವರು ದೂರಿನಲ್ಲಿ ತಿಳಿಸಿದಂತೆ ಆ.25ರಂದು ರಾತ್ರಿ 10 ಗಂಟೆ ಸುಮಾರಿಗೆ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಆರ್.ಟಿ.ಒ ಬಳಿ ಇರುವ ಹಾಲಿನ ಬೂತಿನ ಮುಂಭಾಗದಲ್ಲಿ ಮೈದಾನದ ಗೇಟ್ ಬಳಿ ತಲುಪಿದಾಗ ಹೊಯ್ಸಳ ವಾಹನದಲ್ಲಿ ಬಂದು ಅದರ ಚಾಲಕ ಹಿರಣ್ಣ ಬೆನ್ನಿ ಮತ್ತು ಸಿಬಂದಿ ಶಿವರಾಜ್ ಎಂಬವರು ರವಿರಾಜ ಅವರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಶಿವರಾಜ್ ಕೈಯಲ್ಲಿದ್ದ ಬೆತ್ತದಿಂದ ರವಿರಾಜ ಅವರ ಭುಜಕ್ಕೆ ಮತ್ತು ಕಾಲಿಗೆ ಹೊಡೆದು ಚಡ್ಡಿಯ ಕಿಸೆಯಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಮೊಬೈಲ್ ಕವರ್ ನಲ್ಲಿದ್ದ 300 ರೂ. ವನ್ನು ಬಲತ್ಕಾರವಾಗಿ ಕಸಿದು ಅವಾಚ್ಯ ಶಬ್ದಗಳಿಂದ ಬೈದು ಮತ್ತೊಮ್ಮೆ ಕಂಡರೆ ಜೈಲಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ.
ಆ.27ರಂದು ರಾತ್ರಿ 9.30ರ ಸುಮಾರಿಗೆ ಅದೇ ಸ್ಥಳದಲ್ಲಿ ಹೊರಗಡೆ ರಸ್ತೆಯಲ್ಲಿ ಹೋಗುವಾಗ ಹೊಯ್ಸಳ ವಾಹನದಲ್ಲಿ ಬಂದ ಹೀರಣ್ಣ ಬೆನ್ನಿ ಮತ್ತು ಶಿವರಾಜ್ ಮತ್ತೆ ತಡೆದು ನಿಲ್ಲಿಸಿ, ಮೊಬೈಲ್ ಬಲತ್ಕಾರವಾಗಿ ಕಸಿದು, ಅದರ ಕವರಿನಲ್ಲಿದ್ದ 2 ಎ.ಟಿ.ಎಂ. ಕಾರ್ಡ್ , 1000 ರೂ. ನಗದು ಮತ್ತು ದ್ವಿಚಕ್ರ ವಾಹನದ ಕೀ ತೆಗೆದುಕೊಂಡು, ಇಲ್ಲೇ ನಿಲ್ಲು ವಾಪಾಸು ಬರುತ್ತೇವೆ ಎಂದು ಹೋಗಿದ್ದಾರೆ. ರಾತ್ರಿ 11.30ರ ವೇಳೆಗೆ ವಾಪಾಸು ಬಂದು, ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ, ಇನ್ನೂ ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ. ಹಣ ಇಲ್ಲ ಎ.ಟಿ.ಎಂ. ಕಾರ್ಡ್ ಮಾತ್ರ ಇದೆ ಎಂದು ತಿಳಿಸಿದ್ದಾರೆ. ಆಗ ಪಾಸ್ವರ್ಡ್ ಪಡೆದು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ, ಅದರಲ್ಲಿ 5 ಸಾವಿರ ರೂ. ಇರುವುದು ಕಂಡು 2 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನೀಡದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ. ಬ್ಯಾಂಕ್ ಲೋನ್ ಕಟ್ಟಲು ಇದೆ. ಬಿಟ್ಟು ಬಿಡಿ ಎಂದು ಬೇಡಿಕೊಂಡರೂ ಕೇಳದೆ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಎ.ಟಿ.ಎಂ.ಗೆ ಕರೆದು ಕೊಂಡು ಹೋಗಿ ಹಣ ಡ್ರಾ ಮಾಡಿ ಬರುವಂತೆ ಬೆದರಿಕೆಗೆ ಹಾಕಿದ್ದಾರೆ. ಆಗ 1 ಸಾವಿರ ರೂ. ಡ್ರಾ ಮಾಡಿ, ಮೊಬೈಲ್ ಕವರ್ ನಲ್ಲಿದ್ದ 1000 ರೂ. ಸೇರಿಸಿ 2 ಸಾವಿರ ರೂ. ನೀಡಿದ್ದಾರೆ. ಬಳಿಕ ಅವರ ಮೊಬೈಲ್, ಇನ್ನೊಂದು ಎಟಿಎಂ ಕಾರ್ಡ್ ವಾಹನದ ಕೀ ಕೊಟ್ಟು ಹೋಗಿದ್ದಾರೆ.
ಆ ಬಳಿಕ ನ.4 ರಂದು ಕೆಲಸ ಮುಗಿಸಿ ರಾತ್ರಿ ಎಂದಿನಂತೆ ನೆಹರೂ ಮೈದಾನದಲ್ಲಿ ವಾಕಿಂಗ್ ಮಾಡಿ ಆಯಾಸಗೊಂಡು ಮೈದಾನದ ಹೊರಗೆ ನಿಂತಿರುವಾಗ ರಾತ್ರಿ 9.15ರ ಸುಮಾರಿಗೆ ಹೊಯ್ಸಳ ವಾಹನದಲ್ಲಿ ಬಂದ ಶಿವರಾಜ್ ಮತ್ತು ಇನ್ನೊಬ್ಬ ಪೊಲೀಸ್ ಸಿಬಂದಿ ಹೊಯ್ಸಳ ವಾಹನದ ಬಳಿ ಕರೆದಿದ್ದಾರೆ. ಅಲ್ಲಿ ಹೋದಾಗ ಮೊಬೈಲ್, ದ್ವಿಚಕ್ರ ವಾಹನದ ಕೀಯನ್ನು ಪಡೆದು, ಅವರನ್ನು ವಾಹನದಲ್ಲಿ ಕುಳ್ಳಿರಿಸಿ, ಚಾಲಕನಾಗಿದ್ದ ಶಿವರಾಜ್ ನೀನು ಫೈನ್ ಕಟ್ಟಬೇಕು ಎಂದು ಹೇಳಿದ್ದಾರೆ. ನನ್ನಲ್ಲಿ ಹಣ ಇಲ್ಲ, ಯಾಕೆ ಫೈನ್ ಕಟ್ಟಬೇಕು ಎಂದು ಕೇಳಿದ್ದಾರೆ. ಬಳಿಕ ಪಾಂಡೇಶ್ವರದ ಮಾಲ್ ವರೆಗೆ ಹೋಗಿ ವಾಪಾಸು ಕರೆದುಕೊಂಡು ಬಂದು ಮೊಬೈಲ್ ನೀಡಿ ನಾಳೆ ಬೆಳಗ್ಗೆ 10 ಗಂಟೆಗೆ ಠಾಣೆಗೆ ಬಾ ಎಂದು ಹೇಳಿದ್ದಾರೆ. ಅವರ ಮೊಬೈಲ್ ಸಂಖ್ಯೆ ಪಡೆದು ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದಾರೆ. ಚಾಲಕ ಶಿವರಾಜ್ ವಾಪಾಸು ಬಂದು ಹಣ ನೀಡಿದರೆ ವಾಹನ ಕೊಡುತ್ತೇನೆ ಎಂದು ಹೇಳಿದ್ದು, ಅದಕ್ಕೆ ರವಿರಾಜ ತಾನು ಸ್ಟೇಷನ್ ಗೆ ಬರುತ್ತೇನೆ ಎಂದು ಹೇಳಿದ್ದಾರೆ. ರಾತ್ರಿ ಸುಮಾರು ರಾತ್ರಿ 10-38ಕ್ಕೆ ಸಿಬಂದಿ ಉಮಾನಾಥ ಕರೆ ಮಾಡಿ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.
ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಒಡ್ಡಿ, ಬಲತ್ಕಾರವಾಗಿ ಹಣವನ್ನು ಕಸಿದು ಕೊಂಡ ಪೊಲೀಸ್ ಸಿಬಂದಿ ಶಿವರಾಜ್, ಹೀರಣ್ಣ ಬೆನ್ನಿ ಮತ್ತು ಉಮನಾಥ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿ, ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.