

ಕುಂದಾಪುರ: ಸೌಹಾರ್ದ ಸಹಕಾರಿ ಸೊಸೈಟಿಯೊಂದರಲ್ಲಿ ಠೇವಣಿ ಇರಿಸಿದ್ದ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿರುವುದಾಗಿ ನ್ಯಾಯಾಲಯದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೀರಾ ಕೃಷ್ಣಮೂರ್ತಿ ಎಂಬುವರ ಮಗ ವಿನಯಕುಮಾರ್ ಎಂಬುವರು ಬೀಜಾಡಿ ಗ್ರಾಮದ ಸತೀಶ ಕಾಂಚನ್ ಅವರು 5 ಲಕ್ಷ ರೂ.ಠೇವಣಿ ಇಟ್ಟಲ್ಲಿ 15 ಲಕ್ಷ ರೂ.ಸಾಲ ಕೊಡುವುದಾಗಿ ಹೇಳಿದಂತೆ ಬೀಜಾಡಿಯ ಸಹಕಾರಿ ಸಂಘವೊಂದರಲ್ಲಿ 5 ಲಕ್ಷ ರೂ. ಠೇವಣಿ ಇರಿಸಿ ರಶೀದಿ ಹಾಗೂ ಬಾಂಡ್ ಪಡೆದಿದ್ದರು.
ಇನ್ನಿತರ ಖರ್ಚು ವೆಚ್ಚವೆಂದು ಹೆಚ್ಚುವರಿಯಾಗಿ 2 ಲಕ್ಷ ರೂ. ಸತೀಶ್ ಕಾಂಚನ್ ಪಡೆದಿದ್ದರು. ಬಳಿಕ 15 ಲಕ್ಷ ರೂ. ಸಾಲ ನೀಡದೆ ಠೇವಣಿ ಇರಿಸಿದ 5 ಲಕ್ಷ ರೂ. ಮತ್ತು ಹೆಚ್ಚುವರಿಯಾಗಿ ಪಡೆದ 2 ಲಕ್ಷ ರೂ.ವನ್ನು ಕೊಡದೆ ವಂಚಿಸಿದ್ದರಿಂದ ಮನನೊಂದು ವಿನಯ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆ ಬಳಿಕ ಹಣವನ್ನು ವಾಪಸ್ ಕೇಳಿ ದೂರವಾಣಿ ಕರೆ ಮಾಡಿದಾಗ ಸತೀಶ್ ಕಾಂಚನ್ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಮೀರಾ ಕೃಷ್ಣಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.