ಇದು ಕೆರೆಯಲ್ಲ ಮೇರಿಹಿಲ್-ಲ್ಯಾಂಡ್‌ಲಿಂಕ್ಸ್ ಸಂಪರ್ಕ ರಸ್ತೆ
ಮೇರಿಹಿಲ್‌ನಿಂದ ಹೆಲಿಪ್ಯಾಡ್ ಮೂಲಕ ಲ್ಯಾಂಡ್‌ಲಿಂಕ್ಸ್‌ಗೆ ಸಂಪರ್ಕಿಸುವ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ.
Published on:
Copied
Follow Us
ಮಂಗಳೂರು: ಮೇರಿಹಿಲ್, ಪದವಿನಂಗಡಿ ಹಾಗೂ ಕಾವೂರು ಭಾಗವನ್ನು ಲ್ಯಾಂಡ್‌ಲಿಂಕ್ಸ್‌ಗೆ ಸಂಪರ್ಕಿಸುವ ಹೆಲಿಪ್ಯಾಡ್ ಮೂಲಕ ಸಾಗುವ ಪ್ರಮುಖ ರಸ್ತೆ ಪ್ರತಿ ವರ್ಷದಂತೆ ಈ ವರ್ಷವೂ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಪ್ರತಿ ದಿನ ಶಾಲಾ ಬಸ್‌ಗಳು, ಖಾಸಗಿ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಈ ರಸ್ತೆಯನ್ನು ಅವಲಂಬಿಸಿವೆ. ರಸ್ತೆಯಲ್ಲಿ ನೂರಾರು ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಕೆಸರು ನೀರು ತುಂಬಿಕೊಂಡಿದೆ. ಮೇರಿಹಿಲ್‌ನಿಂದ ಲ್ಯಾಂಡ್‌ಲಿಂಕ್ಸ್‌ಗೆ ತಲುಪಲು ಹತ್ತಿರದ ರಸ್ತೆಯಾದ ಕಾರಣ ಬಹುತೇಕ ಮಂದಿ ಇದನ್ನೇ ಬಳಸುತ್ತಿದ್ದಾರೆ.
ರಸ್ತೆಯ ಹಲವೆಡೆ ಆಳವಾದ ಹೊಂಡಗಳು ನಿರ್ಮಾಣಗೊಂಡಿದ್ದು, ಮಳೆ ನೀರು ಹಾಗೂ ಕೆಸರು ತುಂಬಿಕೊಂಡಿರುವುದರಿಂದ ಹೊಂಡಗಳ ಆಳ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ವಾಹನಗಳು ಹೊಂಡಕ್ಕೆ ಬಿದ್ದು ಹಾನಿಗೊಳಗಾಗುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ.
ಲ್ಯಾಂಡ್‌ಲಿಂಕ್ಸ್‌ನಿಂದ ಮೇರಿಹಿಲ್, ಬೋಂದೆಲ್, ಕಾವೂರು ಮೊದಲಾದ ಕಡೆಗಳಿಗೆ ಶಾಲೆಗಳಿಗೆ ಹೋಗುವ ಮಕ್ಕಳ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆ ಹದಗೆಟ್ಟಿರುವ ಕಾರಣ ವಾಹನಗಳು ನಿಧಾನವಾಗಿ ಸಾಗಬೇಕಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಅನಗತ್ಯ ವಿಳಂಬ ಅನುಭವಿಸುತ್ತಿದ್ದಾರೆ. ಮಳೆಯ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗುತ್ತಿದೆ.
ನಾವು ಮಕ್ಕಳನ್ನು ಶಾಲೆಗೆ ಬಿಡಲು ಇದೇ ರಸ್ತೆಯಲ್ಲಿ ಸಂಚರಿಸುತ್ತೇವೆ. ದಿನದಲ್ಲಿ ನಾಲ್ಕು ಬಾರಿ ಈ ಹೊಂಡ ಬಿದ್ದ ರಸ್ತೆಯಲ್ಲಿ ನಮ್ಮ ವಾಹನ ಸಾಗುತ್ತದೆ. ಪ್ರತೀ ವರ್ಷವೂ ಇಲ್ಲಿ ಈ ಸಮಸ್ಯೆ ಸಾಮಾನ್ಯ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಸಮಸ್ಯೆ ತರಲಾಗಿದ್ದರೂ ಶಾಶ್ವತ ದುರಸ್ತಿ ಕಾಮಗಾರಿ ನಡೆದಿಲ್ಲ. ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಿದರೂ ಕೆಲವೇ ದಿನಗಳಲ್ಲಿ ಮತ್ತೆ ರಸ್ತೆ ಹಾಳಾಗುತ್ತಿದೆ. ಈ ರಸ್ತೆ ಲ್ಯಾಂಡ್‌ಲಿಂಕ್ಸ್ ಸೇರಿದಂತೆ ಸುತ್ತಮುತ್ತಲಿನ ವಸತಿ ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಮಾರ್ಗವಾಗಿರುವುದರಿಂದ, ಸಂಬಂಧಪಟ್ಟ ಇಲಾಖೆ ತಕ್ಷಣ ಶಾಶ್ವತ ಕಾಮಗಾರಿ ಕೈಗೊಂಡು ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯ ನಿವಾಸಿ ಧರಣೇಶ್ ಒತ್ತಾಯಿಸಿದ್ದಾರೆ.
ಮೇರಿಹಿಲ್ ಹೆಲಿಪ್ಯಾಡ್ ಜಾಗ ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೇರಿದ್ದು, ಹೆಲಿಪ್ಯಾಡ್ ಮೂಲಕ ಲ್ಯಾಂಡ್ ಲಿಂಕ್ಸ್ ರಸ್ತೆ ಶಾಶ್ವತ ಅಭಿವೃದ್ಧಿ ಆಗಬೇಕಾಗಿದೆ. ಸಾವಿರಾರು ಮಂದಿ ಈ ರಸ್ತೆಯ ಪ್ರಯೋಜನ ಪಡೆಯುತ್ತಿದ್ದಾರೆ. ಲ್ಯಾಂಡ್‌ಲಿಂಕ್ಸ್ ರಸ್ತೆ ಕೂಡಾ ಅಲ್ಲಲ್ಲಿ ಹದಗೆಟ್ಟಿದ್ದು, ಸರಿಪಡಿಸಬೇಕು.