

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಆದೂರು ಬಳ್ಳಕ್ಕಾಡ್ ನಿವಾಸಿ, ಆಟೋ ಚಾಲಕ ಸದಾನಂದ ಎಂಬುವರ ಮನೆಗೆ ಹಾಡಹಗಲೇ ನುಗ್ಗಿದ ಕಳ್ಳರು ಏಳೂವರೆ ಪವನ್ ಚಿನ್ನಾಭರಣ ದೋಚಿದ್ದಾರೆ. ಮನೆಯ ಬಾಗಿಲು ಮುರಿದು ಕಪಾಟು ಒಡೆದು ಕೃತ್ಯವೆಸಗಿದ್ದಾರೆ. ಸದಾನಂದ ಆಟೋ ಬಾಡಿಗೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ದಾದಿಯಾಗಿರುವ ಪತ್ನಿ ಕೆಲಸಕ್ಕೆ ಹಾಗೂ ಪುತ್ರ ಶಾಲೆಗೆ ಹೋಗಿದ್ದರು. ಸದಾನಂದ ಮನೆಗೆ ವಾಪಸಾದಾಗ ಘಟನೆ ಬೆಳಕಿಗೆ ಬಂದಿದ್ದು, ಆದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಸಾರ್ಟಿಸಿ ಬಸ್‌ನಲ್ಲಿ ನಗದು ಕಳವು
ಕಾಸರಗೋಡು: ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನ 20 ಸಾವಿರ ರೂ. ಕಳವಾಗಿರುವ ಬಗ್ಗೆ ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳತ್ತೂರು ನಿವಾಸಿ, ಪಿಗ್ಮಿ ಸಂಗ್ರಾಹಕ ರಾಘವ ಶನಿವಾರ ಬೆಳಗ್ಗೆ ಕಾಸರಗೋಡಿಗೆ ಹೋಗಿ ಬ್ಯಾಂಕ್‌ನಲ್ಲಿ ಹಣ ಪಾವತಿಸಿದ ಬಳಿಕ 20 ಸಾವಿರ ರೂ. ನೋಟುಗಳ ಕಟ್ಟು ಪಡೆದು ಬ್ಯಾಗಿನಲ್ಲಿ ಇಟ್ಟುಕೊಂಡು ಕುಂಬಳೆಗೆ ತೆರಳಲು ಕೆಎಸ್ಸಾರ್ಟಿಸಿ ಬಸ್ ಹತ್ತಿದ್ದರು. ಬಸ್ ಮೊಗ್ರಾಲ್‌ಗೆ ತಲುಪಿದಾಗ ಬ್ಯಾಗ್‌ನ ಜಿಪ್ ತೆರೆದ ಸ್ಥಿತಿಯಲ್ಲಿತ್ತು. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ ಹಣ ಕಳವಾಗಿತ್ತು. ಈ ಬಗ್ಗೆ ಅವರು ಬಸ್ ನಿರ್ವಾಹಕನಲ್ಲಿ ತಿಳಿಸಿದಾಗ ಬಸ್ಸನ್ನು ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿ ಪ್ರಯಾಣಿಕರನ್ನು ತಪಾಸಣೆ ನಡೆಸಿದರೂ ಹಣ ಪತ್ತೆಯಾಗಲಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಅಪಘಾತದಲ್ಲಿ ಐವರಿಗೆ ಗಾಯ
ಕಾಸರಗೋಡು: ಬೋವಿಕ್ಕಾನ ಜಂಕ್ಷನ್ ಸಮೀಪ ಜೀಪು ಮತ್ತು ಬೈಕ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಸವಾರ ಬದಿಯಡ್ಕದ ಬೋಳುಕಟ್ಟೆ ಅಕ್ಷಯ್ ಕೃಷ್ಣನ್ (23) ಮತ್ತು ಜೀಪು ಪ್ರಯಾಣಿಕ ಕಲ್ಲಕಟ್ಟ ಬಾರಿಕ್ಯಾಡಿನ ನಿಖೇಶ್ (26) ಗಾಯಾಳುಗಳು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡಿನ ಯೋಗೀಶ್ ಎಂಬವರ ನೇತೃತ್ವದಲ್ಲಿ ತಲಕಾವೇರಿ ಕ್ಷೇತ್ರ ದರ್ಶನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇನ್ನೊಂದು ಅಪಘಾತದಲ್ಲಿ ನಯಮರ್‌ಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೆಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ನಜ್ಜುಗುಜ್ಜಾಗಿದೆ.