ಗಂಟೆಗಟ್ಟಲೆ ನಿಲ್ದಾಣವೇ ವಾಸಸ್ಥಾನ

 ಕಾಞಂಗಾಡ್ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ 6 ಗಂಟೆಗೆ ಮಂಗಳೂರು- ಚೆನ್ನೈ ಸೂಪರ್‌ಫಾಸ್ಟ್ ಹತ್ತಲು ಪ್ರಯಾಣಿಕರು ಪ್ರಯತ್ನಿಸುತ್ತಿರುವುದು.
ಕಾಞಂಗಾಡ್ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ 6 ಗಂಟೆಗೆ ಮಂಗಳೂರು- ಚೆನ್ನೈ ಸೂಪರ್‌ಫಾಸ್ಟ್ ಹತ್ತಲು ಪ್ರಯಾಣಿಕರು ಪ್ರಯತ್ನಿಸುತ್ತಿರುವುದು.
Published on
 ವಿಜಯವಾಣಿ ಸುದ್ದಿಜಾಲ ಕುಂಬಳೆ
ಐದೈದು ನಿಮಿಷಗಳ ಅಂತರದಲ್ಲಿ ಸಂಚರಿಸುವ ಮೆಟ್ರೋ ರೈಲುಗಳ ಯುಗದಲ್ಲಿಯೂ, ಕಾಸರಗೋಡಿನ ನಿವಾಸಿಗಳು ರೈಲಿಗಾಗಿ 3 ಗಂಟೆಗಳವರೆಗೆ ಕಾಯಬೇಕಾದ ದುಃಸ್ಥಿತಿ ಎದುರಾಗಿದೆ. ಆಗಮಿಸುವ ರೈಲುಗಳಲ್ಲಿಯೂ, ಜಿಲ್ಲೆಯ ವಿವಿಧೆಡೆ ತಲುಪುವಾಗ ನಿಲ್ಲಲು ಸ್ಥಳವಿರುವುದಿಲ್ಲ. ಹತ್ತಿರದ ಪ್ರಮುಖ ನಗರವಾದ ಮಂಗಳೂರು ಅಥವಾ ನೆರೆಯ ಜಿಲ್ಲೆ ಕಣ್ಣೂರು ಎದುರಿಸದ ಈ ದುಃಸ್ಥಿತಿಯನ್ನು ಕಾಸರಗೋಡು ವಾತ್ರ ಅನುಭವಿಸುವಂತಾಗಿದೆ.
ಮಂಗಳೂರು ಮತ್ತು ಕಣ್ಣೂರಿನಲ್ಲಿ ಕೊನೆಗೊಳ್ಳುವ ಕೆಲವು ರೈಲುಗಳನ್ನು ಕಾಸರಗೋಡಿನ ಮೂಲಕ ವಿಸ್ತರಿಸುವುದು ಇದಕ್ಕಿರುವ ಪರಿಹಾರವಾಗಿದೆ. ಅದಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಂಗಳೂರಿನಿಂದ ಕಾಸರಗೋಡಿಗೆ ಬರಲು ಬಯಸಿದರೆ, ರೈಲುಗಳ ನಡುವಿನ ಮಧ್ಯಂತರವು ಹೆಚ್ಚಾಗಿ 3 ಗಂಟೆಗಳಿರುತ್ತದೆ. ಮತ್ತೊಂದೆಡೆ ಕೋಝಿಕ್ಕೋಡ್‌ನಿಂದ, ಸಂಜೆ 6 ಗಂಟೆಯ ನಂತರ, ಸಾವಾನ್ಯ ಜನರು ಗಂಟೆಗಳಷ್ಟು ಕಾಲ ಕಾಯಬೇಕಾಗುತ್ತಿದೆ.
 ಮಧ್ಯ ಮತ್ತು ದಕ್ಷಿಣ ಜಿಲ್ಲೆಗಳೊಂದಿಗೆ ರೈಲುಗಳ ಸಂಖ್ಯೆ ಮತ್ತು ಅನುಕೂಲಕರ ಸಮಯಗಳನ್ನು ಹೋಲಿಸಿದರೆ, ಉತ್ತರ ಮಲಬಾರ್‌ನಲ್ಲಿ ದಶಕಗಳಿಂದ ಪ್ರಯಾಣಿಕರನ್ನು ನಿರ್ಲಕ್ಷಿಸಲಾಗುತ್ತಿದೆ. ನಾವು ದಕ್ಷಿಣಕ್ಕೆ ಹೋದಂತೆ ರೈಲುಗಳು ನಿಮಿಷಗಳ ಅಂತರದಲ್ಲಿ ಸಂಚರಿಸುತ್ತವೆ, ಆದರೆ ಇಲ್ಲಿ ರೈಲುಗಳು ಗಂಟೆಗಳ ಅಂತರದಲ್ಲಿ ಓಡುತ್ತವೆ.

ದೀರ್ಕಾಲದ ಅಂತರ!

ಮಂಗಳೂರಿನಿಂದ ಬೆಳಗ್ಗೆ 11.05ಕ್ಕೆ ಹೊರಡುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ನಂತರ, ಚೆನ್ನೈ ಮೇಲ್ ಮಧ್ಯಾಹ್ನ 1.55ಕ್ಕೆ ಹೊರಡುತ್ತದೆ. ಮಧ್ಯಾಹ್ನ 2.20ಕ್ಕೆ ಹೊರಡುವ ತಿರುವನಂತಪುರಂ ಎಕ್ಸ್‌ಪ್ರೆಸ್ ನಂತರ, ಸಂಜೆ 4.55ಕ್ಕೆ ಹೊರಡುವ ಚೆನ್ನೈ ಸೂಪರ್‌ಫಾಸ್ಟ್‌ವರೆಗೆ ಬೇರೆ ಯಾವುದೇ ರೈಲು ಇಲ್ಲ. ಸಂಜೆ 6.15ಕ್ಕೆ ಹೊರಡುವ ಮಲಬಾರ್ ಎಕ್ಸ್‌ಪ್ರೆಸ್ ನಂತರ, ಮುಂದಿನ ದೈನಂದಿನ ರೈಲು ರಾತ್ರಿ 11.45ಕ್ಕೆ ಹೊರಡುವ ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್, ಸಂಜೆ 6 ಗಂ ನಂತರ, ತುರ್ತು ಪ್ರಯಾಣಕ್ಕೂ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ.

ಮಂಗಳೂರಿಗೆ ವಿಸ್ತರಿಸಿದರೆ ಸಮಸ್ಯೆ ಪರಿಹಾರ

ಕೋಝಿಕ್ಕೋಡ್ ರೈಲು ನಿಲ್ದಾಣದಿಂದ ಕಾಸರಗೋಡಿಗೆ ಹೋಗುವ ನೇತ್ರಾವತಿ ಎಕ್ಸ್‌ಪ್ರೆಸ್ ಸಂಜೆ 6.05ಕ್ಕೆ ಹೊರಡುತ್ತದೆ. ಅದಾದ ನಂತರ, ಕಾಸರಗೋಡಿಗೆ ದೈನಂದಿನ ಎಕ್ಸ್‌ಪ್ರೆಸ್ ರೈಲು ಇಲ್ಲ. ಹಲವು ವರ್ಷಗಳಿಂದ, ಕಾಸರಗೋಡಿನ ನಿವಾಸಿಗಳು ವಿವಿಧ ಉದ್ದೇಶಗಳಿಗಾಗಿ ಕೋಯಿಕ್ಕೋಡ್ ಮತ್ತು ಕಣ್ಣೂರಿಗೆ ಓಡಾಡುತ್ತಿದ್ದಾರೆ ಮತ್ತು ಸುವಾರು ಒಂಬತ್ತು ರೈಲುಗಳು ಕಣ್ಣೂರಿನಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸುತ್ತಿವೆ. ಅವುಗಳಲ್ಲಿ ಕೆಲವನ್ನು ಕಾಸರಗೋಡು ಅಥವಾ ಮಂಗಳೂರಿಗೆ ವಿಸ್ತರಿಸಿದರೆ, ಪ್ರಯಾಣದ ಸಮಸ್ಯೆಯನ್ನು ಪರಿಹರಿಸಬಹುದು.

ಪ್ರಯಾಣಿಕರ ಆಗ್ರಹವೇನು? 

ಮಂಗಳೂರು ಮತ್ತು ಕಾಸರಗೋಡಿನಲ್ಲಿ ರೈಲುಗಳನ್ನು ನಿಲ್ಲಿಸಲು ಯಾವುದೇ ಸೌಲಭ್ಯವಿಲ್ಲದಿದ್ದರೆ, ನೀಲೇಶ್ವರ ಮತ್ತು ಉಳ್ಳಾಲದಂತಹ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಲು ಇಲಾಖೆ ವ್ಯವಸ್ಥೆ ವಾಡಬಹುದು. ಅಮೃತ್ ಭಾರತ್ ಎಕ್ಸ್‌ಪ್ರೆಸ್ ದಕ್ಷಿಣ ಜಿಲ್ಲೆಗಳಲ್ಲಿ ಕಿಲೋಮೀಟರ್‌ಗಳ ಅಂತರದಲ್ಲಿಯೂ ನಿಲ್ಲಲು ಅವಕಾಶವಿದ್ದರೂ, ಕಣ್ಣೂರು ಬಿಟ್ಟ ನಂತರ ಅದು ಕಾಸರಗೋಡಿನಲ್ಲಿ ವಾತ್ರ ನಿಲ್ಲುತ್ತದೆ. ಕನಿಷ್ಠ ನಗರ ಪ್ರದೇಶಗಳಾದ ಕಾಞಂಗಾಡ್, ಕುಂಬಳೆ, ಮಂಜೇಶ್ವರ ನಿಲ್ದಾಣಗಳಿಗೆ ಅವಕಾಶ ನೀಡಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಾರೆ.

  ಪ್ರಮುಖ ಬೇಡಿಕೆಗಳು

 - ಮಂಗೂರಿನಿಂದ ಮಧ್ಯಾಹ್ನ 3.30ಕ್ಕೆ ಹೊಸ ಪ್ಯಾಸೆಂಜರ್ ರೈಲು ಹೊರಡಲು ಅವಕಾಶ ನೀಡಬೇಕು.
 - ಅಂತ್ಯೋದಯ ಎಕ್ಸ್‌ಪ್ರೆಸ್ ಪ್ರತಿದಿನ ಕಾರ್ಯನಿರ್ವಹಿಸಬೇಕು.
 - ಪ್ರಸ್ತುತ ಕಣ್ಣೂರಿನಲ್ಲಿ ಕೊನೆಗೊಳ್ಳುವ ಆಲಪ್ಪುಳ- ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್, ಶೋರ್ನೂರು- ಕಣ್ಣೂರು ವಿಶೇಷ ರೈಲು (06031), ಮತ್ತು ಕೊಯಮತ್ತೂರು- ಕಣ್ಣೂರು ಪ್ಯಾಸೆಂಜರ್ (16608)ಗಳನ್ನು ಕನಿಷ್ಠ ಮಂಗಳೂರು ಅಥವಾ ಕಾಸರಗೋಡಿಗೆ ವಿಸ್ತರಿಸಬೇಕು.

ಒಂದು ರೈಲು ತೆರಳಿ ಬಳಿಕ ಮತ್ತೊಂದಕ್ಕೆ ಗಂಟೆಗಟ್ಟಲೆ ಕಾಯುವಿಕೆ ಖಂಡನಾರ್ಹ. ಜತೆಗೆ ರೈಲಿನ ಬಾಗಿಲುಗಳೆಡೆಯಲ್ಲಿ, ಶೌಚಗೃಹದ ಬಳಿ ಕಿಕ್ಕಿರಿದು ನಿಂತು ಪ್ರಯಾಣಿಸಬೇಕಾದ ದುಃಸ್ಥಿತಿ ಇದೆ. ಮಹಿಳೆಯರು, ಮಕ್ಕಳಿಗೂ ಇದರಿಂದ ಸಮಸ್ಯೆಯಾಗುತ್ತಿದೆ. ಉನ್ನತಾಧಿಕಾರಿಗಳಿಗೆ ವಿದ್ಯಾವಂತ ಯುವ ಜನರೇ ಟ್ವೀಟ್ ವಾಡುವ ಮೂಲಕ ಮತ್ತು ಇತರ ವಿಧಾನಗಳನ್ನು ಬಳಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net