ಶಿಲಾನ್ಯಾಸಕಷ್ಟೇ ಸ್ಟೇಡಿಯಂ ಸೀಮಿತ

 ಶಿಲಾನ್ಯಾಸಕ್ಕಷ್ಟೇ ಸೀಮಿತವಾಗಿರುವ ಬಜಕೂಡ್ಲು ಮಿನಿ ಸ್ಟೇಡಿಯಂ.
ಶಿಲಾನ್ಯಾಸಕ್ಕಷ್ಟೇ ಸೀಮಿತವಾಗಿರುವ ಬಜಕೂಡ್ಲು ಮಿನಿ ಸ್ಟೇಡಿಯಂ.
Published on
 ಪುರುಷೋತ್ತಮ ಪೆರ್ಲ ಕಾಸರಗೋಡು 
ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಮಿನಿ ಸ್ಟೇಡಿಯಂನ ಸಮಗ್ರ ಅಭಿವೃದ್ಧಿಗಾಗಿ 1 ಕೋಟಿ ರೂ. ಮೊತ್ತ ಸರ್ಕಾರ ಮೀಸಲಿರಿಸಿದ್ದಷ್ಟೇ ಹೊರತು ಇದುವರೆಗೆ ಕಾಮಗಾರಿ ಆರಂಭಿಸದಿರುವುದು ಕ್ರೀಡಾಪಟುಗಳ ಕನಸಿಗೆ ತಣ್ಣೀರು ಎರಚಿದಂತಾಗಿದೆ. 
 ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆಸುವುದು ಹಾಗೂ ಆರೋಗ್ಯಪೂರ್ಣ ಸವಾಜ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದ ‘ಪಂಚಾಯಿತಿಗೊಂದು ಕ್ರೀಡಾಂಗಣ’ಯೋಜನೆಯನ್ವಯ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅನಿದಾನ ಮಂಜೂರುಗೊಳಿಸಿದ್ದು, 2025ರ ಆ.21ರಂದು ಕ್ರೀಡಾ ಸಚಿವ ಅಬ್ದುಲ್‌ರಹವಾನ್ ಕಾಮಗಾರಿಗೆ ಚಾಲನೆ ನೀಡಿದ್ದರು. ಆರು ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳಿಸುವ ಭರವಸೆಯೊಂದಿಗೆ ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡಿದ್ದು, ಆರನೇ ತಿಂಗಳು ಸಮೀಪಿಸಿದರೂ ಕಾಮಗಾರಿ ಇನ್ನೂ ಶಿಲಾನ್ಯಾಸಕ್ಕಷ್ಟೇ ಸೀಮಿತವಾಗಿದೆ. 

ಸ್ಥಳಾವಕಾಶವೂ ಕಡಿಮೆ

 ಸೆವೆನ್ಸ್ ಫುಟ್‌ಬಾಲ್ ಸ್ಟಾೃಂಡಾರ್ಡ್ ಅಳತೆಯ ಮೈದಾನ ಇದಾಗಿದ್ದು, ಸ್ಥಳಾವಕಾಶದ ಕೊರತೆಯ ಕಾರಣದಿಂದ ಈ ಕ್ರೀಡಾಂಗಣ ವಿಸ್ತರಿಸಿ ಅಭಿವೃದ್ಧಿಕಾರ್ಯ ಕೈಗೊಳ್ಳಬೇಕು ಎಂಬ ಬೇಡಿಕೆಯಿದ್ದರೂ ಸೂಕ್ತ ಮನ್ನಣೆ ಇದುವರೆಗೆ ದೊರೆತಿಲ್ಲ. ಮೈದಾನದ ಹಳೇ ಕಟ್ಟಡದ ಒಂದು ಪಾರ್ಶ್ವದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ಮೆಟ್ಟಿಲುಗಳನ್ನು ತೆರವುಗೊಳಿಸದೆ ಹೊಸದಾಗಿ ಕಾಮಗಾರಿ ನಡೆಸಲು ಯೋಜನೆ ರೂಪಿಸಿದ್ದು, ಹಳೇ ಕಾಮಗಾರಿ ತೆರವುಗೊಳಿಸದೇ ಹೊಸ ಕಾಮಗಾರಿ ಆರಂಭಿಸಿದರೆ ಭಾರಿ ಅನಾಹುತವಾಗುವ ಸಾಧ್ಯತೆ ಇದೆ. ಯೋಜನೆ ರೂಪಿಸುವಾಗ ತಜ್ಞರ, ಸಾರ್ವಜನಿಕರ ಜತೆಗೆ ಸಮಾಲೋಚಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಗ್ರಾಮ ಸಭೆಯಲ್ಲೂ ಚರ್ಚೆ

ನಿರ್ದಿಷ್ಟಪಡಿಸಿದ ವಾಯ್ದೆ ಸಮೀಪಿಸುತ್ತಿದ್ದರೂ ಕಾಮಗಾರಿ ಆರಂಭಗೊಳ್ಳದಿರುವ ಕುರಿತು ಎಣ್ಮಕಜೆ ಗ್ರಾಮ ಪಂಚಾಯಿತಿಯ 12ನೇ ವಾರ್ಡ್ ಗ್ರಾಮಸಭೆಯಲ್ಲಿ ಗಂಭೀರವಗಿ ಚರ್ಚೆ ನಡೆದಿತ್ತು. ಮಿನಿ ಸ್ಟೇಡಿಯಂನಲ್ಲಿ ರಾತ್ರಿ ವೇಳೆ ನಡೆಯುವ ವಿವಿಧ ಕ್ರೀಡಾಕೂಟಗಳಿಂದ ಶಬ್ದವಾಲಿನ್ಯ, ತ್ಯಾಜ್ಯ ಸುರಿಯುವಿಕೆ ಹಾಗೂ ಅನಧಿಕೃತ ವಾಹನ ಪಾರ್ಕಿಂಗ್‌ಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಯಿತು

ಕ್ರೀಡಾಂಗಣದಲ್ಲಿರುವ ವ್ಯವಸ್ಥೆಗಳು

 ಬಜಕೂಡ್ಲಿನ ಪರಿಷ್ಕೃತ ಮಿನಿಸ್ಟೇಡಿಯಂನಲ್ಲಿ ಫುಟ್‌ಬಾಲ್, ವಾಲಿಬಾಲ್ ಮೈದಾನ, ಫೆನ್ಸಿಂಗ್ ಒಳಗೊಂಡ ಆವರಣಗೋಡೆ, ನೀರು ಹರಿದುಹೋಗಲು ಚರಂಡಿ, ಗೇಟಿನ ವ್ಯವಸ್ಥೆ,  ಸ್ಟೆಪ್ ಗ್ಯಾಲರಿ, ಶೌಚಗೃಹ, ಕಚೇರಿ, ವಿದ್ಯುತ್ ವ್ಯವಸ್ಥೆ ಮತ್ತು ವೇದಿಕೆ ವ್ಯವಸ್ಥೆ ಇರಲಿದೆ. 22,079 ಚದರ ಅಡಿ ವಿಸ್ತೀರಣ ಹೊಂದಿರುವ ಮೈದಾನವನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. 

ಆರಂಭದಲ್ಲಿ ನಡೆಸಲಾದ ಎಸ್ಟಿಮೇಟ್‌ನಲ್ಲಿ ಕೆಲವೊಂದು ನ್ಯೂನತೆಗಳು ಕಂಡುಬಂದ ಹಿನ್ನೆಲೆಯಲ್ಲಿ ಪರಿಷ್ಕೃತ ಎಸ್ಟಿಮೇಟ್ ಕಳುಹಿಸಿಕೊಡಲಾಗಿದೆ. ಇದರಿಂದ ಕಾಮಗಾರಿ ಆರಂಭಿಸುವಲ್ಲಿ ಒಂದಷ್ಟು ವಿಳಂಬವುಂಟಾಗಿದೆ. ಸ್ಟೇಡಿಯಂ ಕಾಮಗಾರಿ ಶ್ರೀ ಆರಂಭಿಸುವ ಬಗ್ಗೆ ಗಮನ ಹರಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net