ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಸಂಪನ್ನ

ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ನಗರದೆಲ್ಲೆಡೆ ಇಂದು ಮೊಸರು ಕುಡಿಕೆ
  • ವಾಹನ ಸಂಚಾರದಲ್ಲಿ ಬದಲಾವಣೆ
ಮಂಗಳೂರು: ಶುಕ್ರವಾರ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತದ ದೇಗುಲಗಳಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ಸಂಪನ್ನಗೊಂಡವು. ಶನಿವಾರದ ಮೊಸರು ಕುಡಿಕೆ (ವಿಟ್ಲಪಿಂಡಿ) ಮೆರವಣಿಗೆಗೆ ನಗರ ಸಜ್ಜುಗೊಂಡಿದೆ.
ಮೊಸರು ಕುಡಿಕೆ ಒಡೆಯುವುದು ಮತ್ತು ಮೆರವಣಿಗೆಯಲ್ಲಿ ಜನದಟ್ಟಣೆಯಾಗುವ ಕಾರಣ ನಗರದೊಳಗಿನ ವಾಹನ ಸಂಚಾರದಲ್ಲೂ ಬದಲಾವಣೆ ಮಾಡಲಾಗಿದೆ. ತೊಕ್ಕೊಟ್ಟು ಒಳಪೇಟೆ, ಕದ್ರಿಯ ಶ್ರೀ ಗೋಪಾಲಕೃಷ್ಣ ಮಠ, ಕದರಿಕಂಬಳ, ಅತ್ತಾವರ ಶ್ರೀ ಅರಸು ಮುಂಡತ್ತಾಯ ಮೈದಾನ, ಕೊಟ್ಟಾರದ ಶ್ರೀಕೃಷ್ಣ ಜ್ಞಾನೋದಯ ಮಂದಿರ, ಉರ್ವ ಮೊದಲಾದ ಕಡೆಗಳಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದ್ದು, ಭರದ ತಯಾರಿ ಕಾರ್ಯ ನಡೆಸಲಾಗಿದೆ. ಪೊಲೀಸರು ಕಟ್ಟುನಿಟ್ಟಿನ ಭದ್ರತೆ ವಹಿಸಿದ್ದು, ಅಲ್ಲಲ್ಲಿ ಪರಿಶೀಲನೆಯನ್ನೂ ನಡೆಸಿದ್ದಾರೆ.

ಪಿಲಿಕುಳದಲ್ಲಿ ಇಸ್ಕಾನ್ ವಿಶೇಷ ಕಾರ್ಯಕ್ರಮ

ಶುಕ್ರವಾರ ನಗರದ ಇಸ್ಕಾನ್ ಮಂದಿರ ಸೇರಿದಂತೆ ಶ್ರೀಕೃಷ್ಣನಿರುವ ಹಲವಾರು ದೇಗುಲಗಳಲ್ಲಿ ಶ್ರೀಕೃಷ್ಣ ನಾಮ ಸಂಕೀರ್ತನೆ, ವಿಶೇಷ ಪೂಜೆ, ಅಭಿಷೇಕ, ಭಜನೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಇಸ್ಕಾನ್ ಮಂಗಳೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಪಿಲಿಕುಳದ ಸ್ಕೌಟ್ಸ್ ಭವನದಲ್ಲಿ ನಡೆಯಿತು. ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ 5 ವಿವಿಧ ದೇಶಗಳ ಭಕ್ತಿಗೀತಾ ಕಲಾವಿದರು ಒಟ್ಟಾಗಿ ಅಂತಾರಾಷ್ಟ್ರೀಯ ಭಜನೆ ಮತ್ತು ಕೀರ್ತನೆಗಳನ್ನು ನಡೆಸಿಕೊಟ್ಟರು. ಸಂಜೆ 6 ಗಂಟೆಯಿಂದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ ಹಾಗೂ ಭಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಂಚಾಮೃತ ಮತ್ತು ಇತರ ದ್ರವ್ಯಗಳಿಂದ ಶ್ರೀಕೃಷ್ಣ ಬಲರಾಮರಿಗೆ ಮಹಾಭಿಷೇಕ ನಡೆಯಿತು.
ಶ್ರೀ ಕ್ಷೇತ್ರ ಕುದ್ರೋಳಿಯ ಶ್ರೀಕೃಷ್ಣ ಮಂದಿರದಲ್ಲಿ ಪುಷ್ಪಾಲಂಕಾರ, ವಿಶೇಷ ಪೂಜೆ, ಅಭಿಷೇಕ, ಭಜನಾ ಸಂಕೀರ್ತನೆ ಸಂಪನ್ನಗೊಂಡಿತು. ಕದ್ರಿ ಹಿತ ವಿವಿಧೆಡೆ ಶ್ರೀಕೃಷ್ಣ ವೇಷ ಸ್ಪರ್ಧೆಗಳು ನಡೆದವು.

ಭರ್ಜರಿ ವಹಿವಾಟು; ಪಾಲಿಕೆ ದಾಳಿ

ಮಲ್ಲಿಗೆ, ಸೇವಂತಿ, ಚೆಂಡು ಹೂವು, ಹಣ್ಣು, ತರಕಾರಿ ಮಾರುಕಟ್ಟೆಗಳಲ್ಲೂ ಭರ್ಜರಿ ವ್ಯಾಪಾರ-ವಹಿವಾಟು ನಡೆಯಿತು. ಬೀದಿಬದಿಗಳಲ್ಲಿ ಹೂವಿನ ರಾಶಿಗಳು ಕಂಡುಬಂದವು.
ಹಂಪನಕಟ್ಟೆ ಸೇರಿದಂತೆ ಇತರೇಡೆಗಳ ಫುಟ್‌ಪಾತ್‌ಗಳಲ್ಲಿ ಹೂವು ಮಾರಾಟ ಮಾಡುತ್ತಿದ್ದವರನ್ನು ಮಂಗಳೂರು ಮಹಾನಗರ ಪಾಲಿಕೆಯವರು ತೆರವುಗೊಳಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಹಬ್ಬಗಳ ಸಂದರ್ಭಗಳಲ್ಲಿ ಹೊರಜಿಲ್ಲೆಗಳಿಂದ ಹೂವುಗಳನ್ನು ತಂದು ಮಾರಾಟ ಮಾಡುವ ಹೂವಿನ ವ್ಯಾಪಾರಿಗಳು ಸಾಮಾನ್ಯವಾಗಿ ಬೀದಿಬದಿಗಳಲ್ಲಿ ಹೂವನ್ನು ರಾಶಿ ಹಾಕಿ ಅಂಗಡಿಗಳಿಗಿಂತ ತುಸು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುತ್ತಾರೆ. ಶುಕ್ರವಾರವೂ ಅದೇ ರೀತಿ ನಗರದ ಫುಟ್‌ಪಾತ್‌ಗಳಲ್ಲಿ ಹೂವಿನ ಮಾರಾಟ ನಡೆಯುತ್ತಿತ್ತು. ಅಲ್ಲಿಗೆ ಅಧಿಕಾರಿಗಳು ದಾಳಿ ನಡೆಸಿ ತೆರವುಗೊಳಿಸಿದ್ದಾರೆ.

ವ್ಯಾಪಾರಿಗಳ ಆಕ್ರೋಶ

ಹಬ್ಬಗಳಂತಹ ವಿಶೇಷ ದಿನಗಳಲ್ಲಿ ಗ್ರಾಹಕರಿಗೆ ಬೀದಿಬದಿಗಳಲ್ಲಿ ಕಡಿಮೆ ಬೆಲೆಯಲ್ಲಿ ಹೂವು ಸಿಗುತ್ತವೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿರುವುದರಿಂದ ಹೆಚ್ಚಿನ ಬೆಲೆಯಲ್ಲಿ ಅಂಗಡಿಗಳಲ್ಲಿ ಕೊಳ್ಳುವಂತಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಪಾಲಿಕೆ ಅಧಿಕಾರಿಗಳ ಈ ದಾಳಿ ಖಂಡನೀಯ ಎಂದು ಬೀದಿಬದಿ ವ್ಯಾಪಾರಿಗಳ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net