

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಕೇಂದ್ರಿಯ ತನಿಖಾ ದಳ (ಸಿಬಿಐ) ಮರು ತನಿಖೆ ಮಾಡಿದರೆ ಮಾತ್ರ ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಹೈಕೋರ್ಟ್ನ ಹಿರಿಯ ವಕೀಲ ಅಮೃತೇಶ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಜವಾದ ಆರೋಪಿಯೇ ಸಂತೋಷ್ ರಾವ್. ಆದರೆ ಈ ಹಿಂದೆ ಸಿಬಿಐ ಪ್ರಾಸಿಕ್ಯೂಷನ್, ಪ್ರಕರಣದಲ್ಲಿನ ಬಲವಾದ ಸಾಕ್ಷಿಗಳನ್ನು ಹಿಂದಕ್ಕಿಟ್ಟು ವಾದ ಮಂಡನೆ ಮಾಡಿತು. ಇದರಿಂದಾಗಿ ಸಂತೋಷ್ರಾವ್ ನಿರಪರಾಧಿಯಾದ ಎಂದು ವಿವರಿಸಿದರು.
ಸೌಜನ್ಯಳಿಗೆ ನ್ಯಾಯ ಸಿಗಬೇಕು ಎನ್ನುವುದು ಎಲ್ಲರ ಆಶಯವೂ ಹೌದು. ಆದರೆ ಈ ಪ್ರಕರಣದಲ್ಲಿ ಸಿಬಿಐ ಸರ್ಕಾರಿ ಅಭಿಯೋಜಕರೊಬ್ಬರು ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವ ಸಂಘಟನೆಗಳ ಪರ ಕೆಲಸ ಮಾಡಿದ್ದರಿಂದ ಪ್ರಕರಣದ ದಿಕ್ಕು ತಪ್ಪಿತು. ಇದರಿಂದ ಸೌಜನ್ಯಳಿಗೆ ಅನ್ಯಾಯವಾಯಿತು ಎಂದರು.
ನಿರಪರಾಧಿ ಸಂತೋಷ್ ರಾವ್ ವಿರುದ್ಧ ವಾದ ಮಂಡಿಸಲು ಸಾಕಷ್ಟು ಸಾಕ್ಷ್ಯಗಳಿದ್ದವು. ಅವೆಲ್ಲವನ್ನು ಪ್ರಾಸಿಕ್ಯೂಷನ್ ಹಿಂದಕ್ಕಿಟ್ಟಿತ್ತು. ಈ ಬೆಳವಣಿಗೆ ನಡುವೆ ಸೌಜನ್ಯಳನ್ನು ಮುಂದಿಟ್ಟುಕೊಂಡು ಒಂದು ನಿರ್ದಿಷ್ಟ ವರ್ಗದ ಜನರು ಬೃಹತ್ ಮಠಮಾನ್ಯ-ದೇವಸ್ಥಾನ, ಹಿಂದೂ ಗುರುಗಳು ಹಾಗೂ ಮಠಾಧೀಶರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ಮಹಾ ಅಭಿಯಾನ ನಡೆಸಿದ್ದಾರೆ. ಈ ಮೂಲಕ ಹೋರಾಟದ ಹೆಸರಿನಲ್ಲಿ 1 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಲಾಗಿದೆ ಹಾಗೂ ಕೆಲವರು ಅದರಿಂದ ಲಾಭ ಪಡೆಯುತ್ತಿದ್ದಾರೆ ಎಂದು ಅಮೃತೇಶ್ ಆರೋಪಿಸಿದರು.
ಸುಪ್ರೀಂ ಕೋರ್ಟ್ ನಿರ್ದೂಷಿ ಸಂತೋಷ್ರಾವ್ನನ್ನು ತನಿಖೆಗೆ ಒಳಪಡಿಸದಂತೆ ರಕ್ಷಣೆ ನೀಡಿದೆ. ಇದೀಗ ಮರು ತನಿಖೆಗೆ ಇಳಿದ ಎಸ್ಐಟಿ ಅಂದು ಆರೋಪಿಯಾಗಿದ್ದ ಸಂತೋಷ್ರಾವ್ನನ್ನು ಬಿಟ್ಟು ಹೇಗೆ ತನಿಖೆ ಮಾಡಲಿದೆ? ಅದರಲ್ಲೂ ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಸಾಕ್ಷ್ಯಗಳ ಕೊರತೆ ಕಾರಣ ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಇಲ್ಲದಂತಾಗಲಿದೆ ಎಂದರು.
ಈಗಾಗಲೇ ಈ ಪ್ರಕರಣದಲ್ಲಿ ಬುರುಡೆ ಗ್ಯಾಂಗ್ ಸಲುವಾಗಿ ಕೋಟ್ಯಂತರ ರೂ.ಗಳನ್ನು ಖರ್ಚು ಮಾಡಲಾಗಿದೆ. ಹೊಸದಾಗಿ ನಡೆಯುವ ತನಿಖೆಯಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಮತ್ತು ಇದರಿಂದ ಸಾರ್ವಜನಿಕರ ಹಣ ವ್ಯರ್ಥವಾಗಬಹುದು. ಆದರೆ, ಮರುತನಿಖೆಯ ವ್ಯಾಪ್ತಿ ಹಾಗೂ ಕಾನೂನು ಪರಿಣಾಮಗಳನ್ನು ನ್ಯಾಯಾಲಯದ ಆದೇಶದ ಪೂರ್ಣಪಾಠದ ಆಧಾರದಲ್ಲಿ ಪರಿಶೀಲಿಸಬೇಕು. ತನಿಖೆ ಪೂರ್ಣಗೊಳ್ಳುವ ಮೊದಲೇ ವ್ಯಕ್ತಿಗಳು ಅಥವಾ ಸಂಘಟನೆಗಳು ಅಪರಾಧಿಗಳೆಂದು ಬಿಂಬಿಸುವ ಮಾಧ್ಯಮ ವಿಚಾರಣೆ ಸರಿಯಲ್ಲ. ಆರೋಪ ಮತ್ತು ಸಾಬೀತಾದ ಅಪರಾಧದ ನಡುವಿನ ವ್ಯತ್ಯಾಸ ಗುರುತಿಸಬೇಕು. ಸೌಜನ್ಯ ಪ್ರಕರಣದ ಸತ್ಯ ಹೊರಬರಲು ಅಧಿಕೃತ ದಾಖಲೆಗಳು, ವಿಧಿವಿಜ್ಞಾನ ವರದಿಗಳು ಮತ್ತು ನ್ಯಾಯಾಲಯದ ಆದೇಶಗಳ ಆಧಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅಮೃತೇಶ್ ಒತ್ತಾಯಿಸಿದರು.