

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕಂಬಳ ಕ್ಷೇತ್ರದ ದಂತಕತೆ, ಅಪಾರ ಅಭಿಮಾನಿಗಳ ನೆಚ್ಚಿನ ಕೋಣ ನಂದಳಿಕೆಯ 'ಪಾಂಡು' ಅನಾರೋಗ್ಯದಿಂದ ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದೆ.
ನಂದಳಿಕೆ ಶ್ರೀಕಾಂತ್ ಭಟ್ ಮನೆಯ ಹಿರಿಯ ಸದಸ್ಯನಂತಿದ್ದ ಪಾಂಡು, ಹಲವು ವರ್ಷಗಳ ಕಾಲ ಕಂಬಳದ ಕಣದಲ್ಲಿ ಮಿಂಚಿನ ಓಟದ ಮೂಲಕ ತನ್ನದೇ ಆದ ಛಾಪು ಮೂಡಿಸಿತ್ತು.
ಪಾಂಡು 8 ವರ್ಷಗಳ ಕಾಲ ಕಂಬಳದಲ್ಲಿ ಚಾಂಪಿಯನ್ ಆಗಿ ಮಿಂಚಿದ್ದು, ತನ್ನ ಅದ್ಭುತ ಓಟದ ಮೂಲಕ 200ಕ್ಕೂ ಅಧಿಕ ಪದಕಗಳನ್ನು ಗೆದ್ದು ಸಾಧನೆ ಮಾಡಿತ್ತು. ಕಂಬಳದ ಕಣದಲ್ಲಿ ಅದರ ವೇಗ ಹಾಗೂ ಪ್ರದರ್ಶನ ಕಂಬಳಾಭಿಮಾನಿಗಳ ಗಮನ ಸೆಳೆದಿತ್ತು. ನೇಗಿಲು ವಿಭಾಗ, ಹಗ್ಗ ಕಿರಿಯ, ಹಗ್ಗ ಹಿರಿಯ ವಿಭಾಗದಲ್ಲಿ ಪಾಂಡು ತನ್ನ ಮಾಲೀಕರಿಗೆ ಹಲವು ಗೌರವ ಹಾಗೂ ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು.
ಕೆಲವು ವರ್ಷಗಳ ಹಿಂದೆ ಕಂಬಳ ಸ್ಪರ್ಧೆಯಿಂದ ಪಾಂಡು ನಿವೃತ್ತಿ ಪಡೆದಿದ್ದರೂ ಅಭಿಮಾನಿಗಳಲ್ಲಿ ಅದರ ಜನಪ್ರಿಯತೆ ಮಾತ್ರ ಕಡಿಮೆಯಾಗಿರಲಿಲ್ಲ. ಪಾಂಡುವಿನ ಜನಪ್ರಿಯತೆಯಿಂದ ಹಲವು ಸಂಘ ಸಂಸ್ಥೆಗಳು, ಕಂಬಳ ಅಭಿಮಾನಿಗಳು ಗೌರವಿಸಿದ್ದಾರೆ.
ಕಾರ್ಕಳ ಜೀವನ್ ದಾಸ್ ಅಡ್ಯಂತಾಯರ ಮನೆಯಲ್ಲಿದ್ದ ಪಾಂಡು ಅಲ್ಲಿಂದಲೇ ಕಂಬಳ ಜೀವನ ಆರಂಭಿಸಿದ್ದ. ಅವರು ಜೂನಿಯರ್ ಹಗ್ಗ ವಿಭಾಗದಲ್ಲಿ ಓಡಿಸುತ್ತಿದ್ದರು. ಒಂದು ವರ್ಷದ ಬಳಿಕ ಅತ್ತೂರು ಮನ್ಮಥ ಶೆಟ್ಟಿ ತನ್ನ ಕಂಬಳ ಜರ್ನಿಯ ಆರಂಭಕ್ಕಾಗಿ ಅಡ್ಯಂತಾಯರಿಂದ ಪಾಂಡುವನ್ನು ಕರೆತಂದರು. ಅಲ್ಲಿಂದ ಪಾಂಡುವಿನ ಮೆಡಲ್ ಜರ್ನಿ ಆರಂಭ. ಜೂನಿಯರ್ ಹಗ್ಗ ವಿಭಾಗದಲ್ಲಿ ಸತತ ಎರಡು ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದ. ಬಳಿಕ ನಂದಳಿಕೆಯ ಶ್ರೀಕಾಂತ್ ಭಟ್ ಮನೆಗೆ ಬಂದ ಬಳಿಕ ಹಲವು ಪ್ರಶಸ್ತಿಯನ್ನು ಗಳಿಸಿತ್ತು.
ವಿಶೇಷವೆಂದರೆ, ಕಾಲಿನಲ್ಲಿ ಸ್ವಲ್ಪ ದೋಷವಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ ಕಂಬಳದ ಕಣದಲ್ಲಿ ಬಿರುಗಾಳಿಯಂತೆ ಓಡಿ 'ಅಭಿಮಾನಿಗಳ ಸರದಾರ' ಹಾಗೂ 'ಲೆಜೆಂಡ್' ಎಂಬ ಖ್ಯಾತಿಗೆ ಪಾಂಡು ಪಾತ್ರವಾಗಿತ್ತು. ಕಂಬಳ ಲೋಕದಲ್ಲಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಕೋಣಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಪಾಂಡು 18 ವರ್ಷಗಳ ಕಾಲ ಕಂಬಳ ಕರೆಯನ್ನು ತನ್ನದೇ ಸಾಮ್ರಾಜ್ಯವನ್ನಾಗಿಸಿ ಆಳಿದ ದೊರೆ. ಕಂಬಳ ಲೋಕದಲ್ಲಿ ಅದೆಷ್ಟೋ ಕೋಣಗಳು ಓಡಿವೆ, ಪದಕ ಗೆದ್ದುಕೊಂಡಿವೆ. ಆದರೆ ಲೆಜೆಂಡ್ ಪಟ್ಟಕ್ಕೇರಿದ ಕೋಣಗಳು ಕೆಲವೇ ಕೆಲವು. ಅದರಲ್ಲಿ ಒಂದು ಈ ಪಾಂಡು.
ಅತ್ತೂರು ಪಾಂಡು, ಕರಿಂಜೆ ಪಾಂಡು ಕೊನೆಗೆ ನಂದಳಿಕೆ ಪಾಂಡು ಎಂಬ ಹೆಸರಿನಲ್ಲಿ ಕಂಬಳದಲ್ಲಿ ಮೆರೆದ ಈ ಕೋಣ, ಗಳಿಸಿದ್ದು ಬರೋಬ್ಬರಿ 201 ಪದಕಗಳನ್ನು. ಕೇವಲ ಹಗ್ಗ ವಿಭಾಗದಲ್ಲಿ ಓಡಿದ ಕೋಣವೊಂದು ಇಷ್ಟು ಮೆಡಲ್ ಗೆದ್ದ ಉದಾಹರಣೆ ಮತ್ತೊಂದಿಲ್ಲ. ಪಾಂಡು ನಿಧನದಿಂದ ಮಾಲೀಕರು ಹಾಗೂ ಕಂಬಳಾಭಿಮಾನಿಗಳಲ್ಲಿ ದುಃಖ ಆವರಿಸಿದೆ. ಪ್ರೀತಿಯಿಂದ ಸಾಕಿದ ಈ ಚಾಂಪಿಯನ್ ಕೋಣನ ನೆನಪು ಕಂಬಳ ಲೋಕದಲ್ಲಿ ಸದಾ ಉಳಿಯಲಿದೆ. ಕಂಬಳ ಲೋಕದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿ ದಂತಕತೆಯಾಗಿದ್ದ ಪಾಂಡುವಿನ ನಿಧನಕ್ಕೆ ಕಂಬಳ ಸಮಿತಿಗಳು, ಮಾಲೀಕರು ಮತ್ತು ತುಳುನಾಡಿನ ಅಪಾರ ಕಂಬಳಾಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.