ಎಡಪದವಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ

ಮುಚ್ಚೂರು ಕ್ರಾಸ್ ಬಳಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಯಿತು.
ಮುಚ್ಚೂರು ಕ್ರಾಸ್ ಬಳಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಯಿತು.
Published on
ಗುರುಪುರ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಮುಚ್ಚೂರು ಕ್ರಾಸ್ ಬಳಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಹೆದ್ದಾರಿಗೆ ಪರ್ಯಾಯವಾಗಿ ತಾತ್ಕಾಲಿಕ ರಸ್ತೆ ನಿರ್ಮಾಣಗೊಂಡಿದ್ದು, ಮಂಗಳವಾರ ಸಂಜೆ ವೇಳೆಗೆ ಬಸ್‌ಗಳ ಸಹಿತ ಸಣ್ಣ ವಾಹನ ಸಂಚಾರ ಆರಂಭಗೊಂಡಿದೆ.
ಹೆದ್ದಾರಿ ದುರಸ್ತಿಗಾಗಿ ವಾಹನ ಸಂಚಾರ ನಿಷೇಧಿಸಿದ ಬಳಿಕ ಎಡಪದವು, ಮಿಜಾರು ಪರಿಸರದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಎಡಪದವು ಪೇಟೆಯಲ್ಲಿ ಬಸ್ ಸಂಚಾರವಿಲ್ಲದೆ ಮಂಗಳೂರು-ಮೂಡುಬಿದಿರೆ ಭಾಗದ ಮಂದಿ ನೂರಾರು ರೂಪಾಯಿ ಬಾಡಿಗೆ ನೀಡಿ ರಿಕ್ಷಾಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಉಂಟಾಗಿತ್ತು. ಈ ಬಗ್ಗೆ ಸಾರ್ವಜನಿಕರು ಶಾಸಕ ಡಾ.ಭರತ್ ಶೆಟ್ಟಿಯವರಿಗೆ ದೂರು ನೀಡಿದ್ದರು. ಭರತ್ ಶೆಟ್ಟಿ ಕಳೆದ ಗುರುವಾರ ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿಯಾಗುತ್ತಿರುವ ಹೆದ್ದಾರಿ ಪಕ್ಕದ ಖಾಸಗಿ ಜಾಗದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಕನಿಷ್ಠ ಬಸ್ ಮತ್ತು ಲಘು ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದ್ದರು.
ಜಾಗದ ಮಾಲೀಕರಾದ ವಿಜಯ್ ಲೂವಿಸ್, ವಿಲ್ಫ್ರೆಡ್ ಲೂವಿಸ್ ಅನುಮತಿ ಪಡೆದು ಹೆದ್ದಾರಿ ವಿಸ್ತರಣೆಯ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಸಂಸ್ಥೆ ತಾತ್ಕಾಲಿಕ ರಸ್ತೆ ನಿರ್ಮಿಸಿದೆ. ಆದರೆ ಈ ರಸ್ತೆಯಲ್ಲಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡುವುದಿಲ್ಲ ಎಂದು ಗುತ್ತಿಗೆ ಸಂಸ್ಥೆ ಹೇಳಿತ್ತು. ಸ್ಥಳೀಯರು ಶಾಸಕರಲ್ಲಿ ಮತ್ತೊಂದು ಬಾರಿ ದೂರು ನೀಡಿದ್ದು, ಮಂಗಳವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಡಚಣೆ ಬಗೆಹರಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net