ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನೂರಾರು ನಾಗರಿಕರು ಕುಟುಂಬ ಸಮೇತರಾಗಿ ಭಾಗವಹಿಸಿ ಉಚಿತ ಆರೋಗ್ಯ ಸೇವೆಗಳ ಸದುಪಯೋಗ ಪಡೆದರು. ಸಾಮಾನ್ಯ ತಪಾಸಣೆ, ಎಲುಬುಕೀಲು, ಕಿವಿ-ಮೂಗು-ಗಂಟಲು, ಕಣ್ಣು, ಹೃದಯ, ಕ್ಯಾನ್ಸರ್, ಸ್ತ್ರೀ ಹಾಗೂ ಮಕ್ಕಳ ರೋಗ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ರಕ್ತದೊತ್ತಡ, ಮಧುಮೇಹ ಪರೀಕ್ಷೆ, ಉಚಿತ ಔಷಧ ವಿತರಣೆ, ಅಗತ್ಯವಿದ್ದವರಿಗೆ ಇಸಿಜಿ ತಪಾಸಣೆ ಸೇರಿದಂತೆ ವಿವಿಧ ಸೇವೆಗಳು ಲಭ್ಯವಾಗಿದ್ದು, ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಉಚಿತ ಓದುವ ಕನ್ನಡಕಗಳ ವಿತರಣೆ ವಿಶೇಷ ಆಕರ್ಷಣೆಯಾಗಿತ್ತು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿಶೇಷವಾಗಿ ಮಹಿಳೆಯರು ಹಾಗೂ ಹಿರಿಯ ನಾಗರಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಯಿತು.