ಸಾವಿರಾರು ಕುಟುಂಬಗಳಿಗೆ ಆಸರೆಯಾದ ಧನ್ಯತೆ

ಪ್ರಗತಿಬಂಧು ಒಕ್ಕೂಟ ಫಲಾನುಭವಿಗಳ ಸಂವಾದ
ಪ್ರಗತಿಬಂಧು ಒಕ್ಕೂಟದ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ಎಸ್‌ಕೆಡಿಆರ್‌ಡಿಪಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಯೋಜನೆಯ ಟ್ರಸ್ಟಿ ಹರಿಕೃಷ್ಣ ಮತ್ತಿತರರಿದ್ದರು.
ಪ್ರಗತಿಬಂಧು ಒಕ್ಕೂಟದ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು. ಎಸ್‌ಕೆಡಿಆರ್‌ಡಿಪಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಯೋಜನೆಯ ಟ್ರಸ್ಟಿ ಹರಿಕೃಷ್ಣ ಮತ್ತಿತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುತ್ತಿರುವ ಎಲ್ಲ ಸೇವಾ ಕಾರ್ಯಗಳಿಗೆ ಮಂಜುನಾಥ ಸ್ವಾಮಿಯ ಅನುಗ್ರಹವೇ ಕಾರಣ. ನಾನು ಕೇವಲ ನಿಮಿತ್ತ. ಆರಂಭದ ದಿನಗಳಲ್ಲಿ ಕೈಗೊಂಡ ಪ್ರಯತ್ನಗಳು ಇಂದು ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾಗಿರುವುದು ಧನ್ಯತೆ ತಂದಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಅರಸಿನಮಕ್ಕಿಯ ಗೋಪಾಲಕೃಷ್ಣ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಬಂಧು ಒಕ್ಕೂಟದ ಹಿರಿಯ ಫಲಾನುಭವಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಕೆಡಿಆರ್‌ಡಿಪಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಗ್ಗಡೆಯವರ ದೂರದೃಷ್ಟಿಯ ಚಿಂತನೆಯಿಂದ ಆರಂಭಗೊಂಡ ಗ್ರಾಮಾಭಿವೃದ್ಧಿ ಯೋಜನೆ ಇಂದು ರಾಜ್ಯಾದ್ಯಂತ ಸುಮಾರು 53 ಲಕ್ಷ ಕುಟುಂಬಗಳಿಗೆ ಆಸರೆಯಾಗಿದೆ. ಯೋಜನೆಯ ಯಶಸ್ಸಿಗೆ ರೆಖ್ಯ ಮತ್ತು ಹತ್ಯಡ್ಕ ಗ್ರಾಮಗಳ ಜನರು ಹಾಕಿದ ಭದ್ರ ಬುನಾದಿ ಮಹತ್ವದ್ದಾಗಿದೆ ಎಂದರು.

ಹೇಮಾವತಿ ವಿ.ಹೆಗ್ಗಡೆ ಅವರು ಬೆಂಗಳೂರಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಶುಭಹಾರೈಸಿದರು. ಯೋಜನೆಯ ಟ್ರಸ್ಟಿ ಹರಿಕೃಷ್ಣ ಹಾಗೂ ಹಣಕಾಸು ಮಾರ್ಗದರ್ಶಕ ಶಾಂತಾರಾಮ ಪೈ ಉಪಸ್ಥಿತರಿದ್ದರು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ದಿನೇಶ್ ವಂದಿಸಿದರು. ಪೂರ್ಣಕುಂಭ ಸ್ವಾಗತ, ಭಜನೆ, ಕುಣಿತ ಭಜನೆ ಹಾಗೂ ಹುಲಿವೇಷ ಮೆರವಣಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಹತ್ಯಡ್ಕ, ರೆಖ್ಯ, ಶಿಶಿಲ, ಶಿಬಾಜಿ ಗ್ರಾಮಗಳ ಫಲಾನುಭವಿಗಳು ಭಾಗವಹಿಸಿದ್ದರು.

ಹಳೇ ನೆನಪುಗಳ ಮೆಲುಕು

ಕೂಲಿ ಕೆಲಸವನ್ನೇ ನಂಬಿದ್ದ ಬದುಕು, ಸ್ವಂತ ಭೂಮಿಯಲ್ಲಿ ಕೃಷಿ ಮಾಡಿ ಸ್ವಾವಲಂಬನೆ ಸಾಧಿಸಿದ ಪಯಣ, ಮಕ್ಕಳಿಗೆ ಶಿಕ್ಷಣ ಕೊಡಿಸಿದ ಸಂತೃಪ್ತಿ ಹೀಗೆ ತಮ್ಮ ಅನುಭವಗಳನ್ನು ಹಿರಿಯ ಫಲಾನುಭವಿಗಳಾದ ಕೃಷ್ಣಪ್ಪ ಗೌಡ ಶಿಶಿಲ, ಐತಪ್ಪ ಮೂಲ್ಯ, ದರ್ಣಪ್ಪ ಗೌಡ ಹಾಗೂ ಕೃಷ್ಣಪ್ಪ ಗೌಡ ಬೆಂಗಾಳ, ರಾತ್ರಿ ಶಾಲೆಯ ಅಧ್ಯಾಪಕರಾಗಿದ್ದ ತ್ಯಾಂಪಣ್ಣ ಶೆಟ್ಟಿಗಾರ್ ಹಂಚಿಕೊಂಡರು. ಹತ್ತು ಮೂಲ ಫಲಾನುಭವಿಗಳಿಗೆ ತೆಂಗಿನ ಸಸಿ ವಿತರಿಸಲಾಯಿತು. ಫಲಾನುಭವಿಗಳು ಹೆಗ್ಗಡೆಯವರಿಗೆ ಫಲತಾಂಬೂಲ ನೀಡಿ ಗೌರವಿಸಿದರು. ಜ್ಞಾನವಿಕಾಸ ಸದಸ್ಯೆ ಗುಲಾಬಿ ಹೆಗ್ಗಡೆಯವರ ಕುರಿತು ರಚಿಸಿದ ಭಕ್ತಿಗೀತೆಗೆ ಮೆಚ್ಚಿ ಹೆಗ್ಗಡೆಯವರು ಉಡುಗೊರೆ ನೀಡಿದರು. ಜ್ಞಾನವಿಕಾಸದ ಮಹಿಳೆಯರು ಜಾನಪದ ನೃತ್ಯ ಪ್ರದರ್ಶಿಸಿದರು.