

ಬೆಳ್ತಂಗಡಿ: ಎಂಡೋಸಲ್ಫಾನ್ ಸಮಸ್ಯೆ ಬೆಳ್ತಂಗಡಿ ತಾಲೂಕಿಗೆ ಶಾಪದ ರೀತಿ ಕಾಡಿದೆ. ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರವನ್ನು ಸ್ಥಳೀಯರು ತಮ್ಮದೇ ಕೇಂದ್ರವೆಂದು ಭಾವಿಸಿ ಆದರ್ಶ ಕೇಂದ್ರವನ್ನಾಗಿ ರೂಪಿಸಬೇಕು. ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಅವರ ಅಭ್ಯುದಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ತಾಲೂಕಿನ ವಿವಿಧೆಡೆ ಮಂಗಳವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ನೂತನ ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ನೂತನ ಕಟ್ಟಡ ಉದ್ಘಾಟಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ವಾಲ್ಮೀಕಿ ಆಶ್ರಮ ಶಾಲೆಗಳ ಅಭಿವೃದ್ಧಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬರುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಶಿಶಿಲ ಮತ್ತು ನೆರಿಯದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.
ವಿವಿಧ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ತಮ್ಮ ಪ್ರದೇಶಗಳ ರಸ್ತೆ, ನೆಟ್‌ವರ್ಕ್ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳನ್ನು ಸಂಸದರ ಗಮನಕ್ಕೆ ತಂದರು. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರು
ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ.ಪಂ. ಮಾಜಿ ಸದಸ್ಯ ಶರತ್, ಮುಂಡಾಜೆ ಪ್ಯಾಕ್ಸ್ ಅಧ್ಯಕ್ಷ ಪ್ರಕಾಶ್ ನಾರಾಯಣ್ ಚಾರ್ಮಾಡಿ, ತಾ.ಪಂ. ಮಾಜಿ ಸದಸ್ಯ ಕೊರಗಪ್ಪ ಗೌಡ, ಕೊಕ್ಕಡ ಗ್ರಾ.ಪಂ. ಮಾಜಿ ಸದಸ್ಯ ಯೋಗೀಶ್ ಗೌಡ ಅಳಂಬಿಲ, ಬಾಲಕೃಷ್ಣ, ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ.ಪಂ. ಮಾಜಿ ಸದಸ್ಯ ಶರತ್, ಮುಂಡಾಜೆ ಪ್ಯಾಕ್ಸ್ ಅಧ್ಯಕ್ಷ ಪ್ರಕಾಶ್ ನಾರಾಯಣ್ ಚಾರ್ಮಾಡಿ, ಜಯಂತ್ ಕೋಟ್ಯಾನ್, ಅರವಿಂದ ಲಾಯಿಲ, ಸೌಮ್ಯಲತಾ ಜಯಂತ್ ಗೌಡ, ಜಯಂತ್ ಗೌಡ, ಬಾಬು ಗೌಡ, ಗಣೇಶ್ ಗೌಡ, ದಿನೇಶ್ ದಿಡುಪೆ, ಉಮೇಶ್ ಕುಲಾಲ್, ಚಂದ್ರಕಾಂತ್ ನಿಡ್ಪಾಜೆ, ಸದಾನಂದ ಪೂಜಾರಿ ಉಂಗಿಲಬೈಲು ಮತ್ತಿತರರು ಉಪಸ್ಥಿತರಿದ್ದರು.
ಕೊಕ್ಕಡದಲ್ಲಿ 83 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗಿರುವ ಎಂಡೋಸಲ್ಫಾನ್ ಸಂತ್ರಸ್ತರ ನೂತನ ಪಾಲನಾ ಕೇಂದ್ರ ಉದ್ಘಾಟಿಸಲಾಯಿತು. ಶಿಶಿಲದಲ್ಲಿ 4 ಕೋಟಿ ರೂ. ಹಾಗೂ ನೆರಿಯದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಆಶ್ರಮ ಶಾಲೆಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಲಾಯಿತು. ಚಾರ್ಮಾಡಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಕಳೆಂಜ, ಕನ್ಯಾಡಿ, ಧರ್ಮಸ್ಥಳ, ಮಿತ್ತಬಾಗಿಲು, ಇಂದಬೆಟ್ಟು, ನಡ, ಕಾಶಿಬೆಟ್ಟು, ಮಲೆಬೆಟ್ಟು, ಕೊಯ್ಯೂರು, ಇಳಂತಿಲ, ಕಲ್ಲೇರಿ ಹಾಗೂ ನ್ಯಾಯತರ್ಪು ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಪೆರ್ಲಬೈಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶೌಚಗೃಹ ಕಾಮಗಾರಿಗೂ ಶಿಲಾನ್ಯಾಸ ನೆರವೇರಿಸಲಾಯಿತು.