

ಕಾಸರಗೋಡು: ಕೇರಳ ಸಹಿತ ವಿವಿಧ ರಾಜ್ಯಗಳನ್ನು ಬಡತನ ಮುಕ್ತಗೊಳಿಸುವುದಕ್ಕಾಗಿ ಜಾರಿಗೊಳಿಸಿರುವ ಉಚಿತ ಆಹಾರ ಪದಾರ್ಥ ಹಾಗೂ ಆರೋಗ್ಯ ವಿಮೆ ಯೋಜನೆಗಳು ಸಹಕಾರಿಯಾಗಿದ್ದು, ಇದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು ಎಂದು ಬಿಜೆಪಿ ಕೇರಳ ವಕ್ತಾರ ವಿ.ಪಿ. ಶ್ರೀಪದ್ಮನಾಭನ್ ಅಭಿಪ್ರಾಯಪಟ್ಟರು.
ಬಿಜೆಪಿ ವತಿಯಿಂದ ಶನಿವಾರ ಆಯೋಜಿಸಿದ್ದ ‘ಅಭಿವೃದ್ಧಿ ಹೊಂದಿದ ಬದಿಯಡ್ಕ’ ಸಂಗಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರು ಸರಬರಾಜು, ವಿದ್ಯುತ್ ಉಚಿತ ಸಂಪರ್ಕ ಸಹಿತ ಮೂಲಸೌಕರ್ಯ ಒದಗಿಸುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜತೆಗೆ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ನಿರುದ್ಯೋಗವೇ ರಾಜ್ಯದ ಪ್ರಮುಖ ಸಮಸ್ಯೆಯಾಗಿದೆ ಎಂದು ಟೀಕಿಸಿದರು.
ಬಿಜೆಪಿ ಬದಿಯಡ್ಕ ಪಂಚಾಯಿತಿ ಚುನಾವಣಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಹೊಂದಿದ ಕೇರಳ-ಅಭಿವೃದ್ಧಿ ಹೊಂದಿದ ಪಂಚಾಯಿತಿ ಧ್ಯೇಯದಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಿಜೆಪಿ ರಾಜ್ಯಕೋಶ ಸಂಯೋಜಕ ವಿ.ಕೆ. ಸಜೀವನ್, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಪ್ರಮುಖರಾದ ಜಯಂತಿ ಶೆಟ್ಟಿ, ಅಶ್ವಿನಿ ಕೆ.ಎಂ., ಪ್ರೇಮಾ ಕುಮಾರಿ, ಮಹೇಶ್ ವಳಕುಂಜ, ಆನಂದ ಕೆ ಉಪಸ್ಥಿತರಿದ್ದರು.