ಸ್ವಾವಲಂಬಿ ಬದುಕಿಗೆ ಸಹಕಾರಿ ಕ್ಷೇತ್ರ ಶಕ್ತಿ ತುಂಬಿದೆ - ಸ್ಪೀಕರ್ ಯು.ಟಿ.ಖಾದರ್ ಅಭಿಮತ

ಅಖಿಲ ಭಾರತ ಸಹಕಾರ ಸಪ್ತಾಹ  ಯು.ಟಿ.ಖಾದರ್  ಉದ್ಘಾಟಿಸಿದರು.
ಅಖಿಲ ಭಾರತ ಸಹಕಾರ ಸಪ್ತಾಹ ಯು.ಟಿ.ಖಾದರ್ ಉದ್ಘಾಟಿಸಿದರು.
Published on
ಮಂಗಳೂರು: ಕರಾವಳಿಯಲ್ಲಿ ಮುಂಚೂಣಿಯಲ್ಲಿರುವ ಸಹಕಾರಿ ಕ್ಷೇತ್ರ ಮಹಿಳೆಯರ, ದುರ್ಬಲ ವರ್ಗದ ಜನತೆಯ ಸ್ವಾಭಿಮಾನದ, ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ‘ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ’ ವಿಷಯದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ, ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರವನ್ನು ಕಟ್ಟಿ ಬೆಳೆಸುವಲ್ಲಿ ಹಿರಿಯರ ಶ್ರಮವನ್ನು ಸ್ಮರಿಸುವ ಜತೆಗೆ ಸಾಧನೆಯ ವೈಭವದ ಮೆರುಗನ್ನು ಸಾರಲು ಸಹಕಾರಿ ಸಪ್ತಾಹ ದ್ಯೋತಕವಾಗಿದೆ. ದೇಶದ ಆತ್ಮ ಗ್ರಾಮೀಣ ಮಟ್ಟದಲ್ಲಿದೆ. ದೂರದೃಷ್ಟಿಯನ್ನಿಟ್ಟು ಬಡ ಮಹಿಳೆಯರನ್ನು ಒಗ್ಗೂಡಿಸಿ, ಸಹಕಾರಿ ಕುಟುಂಬದೊಳಗೆ ಸೇರಿಸಿ ಅವರಿಗೆ ಶಕ್ತಿ, ಧ್ವನಿ ನೀಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಾಧನೆ ಅದಮ್ಯ ಎಂದವರು ಶ್ಲಾಘಿಸಿದರು.
ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ, ಶಾಸಕ ಜಿ.ಟಿ.ದೇವೇ ಗೌಡ ಅವರು ಉತ್ತಮ ಸ್ವ-ಸಹಾಯ ಸಂಘಗಳನ್ನು ಪುರಸ್ಕರಿಸಿ ಮಾತನಾಡಿದರು. ಸಹಕಾರಿ ತತ್ವದಂತೆ ಸರ್ವರಿಗೂ ‘ಸಮ ಬಾಳು-ಸರ್ವರಿಗೂ ಸಮ ಪಾಲು’ ಎಂಬಂತೆ ಪಕ್ಷಾತೀತ, ಧರ್ಮಾತೀತವಾಗಿ ಸರ್ವರ ಅಭಿವೃದ್ಧಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದ ಮನೆ ಮನೆಗೆ ಸಹಕಾರ ಕ್ಷೇತ್ರವನ್ನು ತಲುಪಿಸಿದ್ದಾರೆ. ರೈತರು, ಬಡವರು, ಶೋಷಣೆಗೆ ಒಳಗಾದವರಿಗೆ ಜೀವ ತುಂಬಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅನನ್ಯ. ಜವಾಹರ್‌ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಸಹಕಾರ ಕ್ಷೇತ್ರಕ್ಕೆ ಅಮೂಲಾಗ್ರ ಕೊಡುಗೆ ನೀಡಿದ್ದಾರೆ. ಕಾರ್ಖಾನೆ, ಕೃಷಿ, ವಸತಿ, ವಾಣಿಜ್ಯ, ಶಿಕ್ಷಣಕ್ಕೆ ಸಾಲ ನೀಡುವ ಮೂಲಕ ಸಹಕಾರಿ ಕ್ಷೇತ್ರ ಅತ್ಯಾಪ್ತವಾಗಿದೆ. ದೇಶದಲ್ಲಿ 8.50 ಲಕ್ಷ ಹಾಗೂ ರಾಜ್ಯದಲ್ಲಿ 45 ಸಹಕಾರಿ ಸಂಘಗಳು ಕಾರ್ಯಾಚರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳಿಗೆ ಸಹಕಾರ ಸಂಘಗಳು ಶೇ.90ರಷ್ಟು ಬೆನ್ನೆಲುಬಾಗಿವೆ ಎಂದರು.
ನಂದಿನಿ ಸೀಡ್ಸ್ ಡಿಲೈಟ್ ಹಾಗೂ ನಂದಿನಿ ಗುವಾ ಚಿಲ್ಲಿ ಲಸ್ಸಿಯನ್ನು ಅತಿಥಿಗಳು ಈ ಸಂದರ್ಭ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಸಹಕಾರ ಶಿಕ್ಷಣ ನಿಧಿಗೆ 1.62 ಕೋಟಿ ರೂ. ಸಮರ್ಪಿಸಲಾಯಿತು. ‘ನವೋದಯ’ ಸ್ಮರಣ ಸಂಚಿಕೆ ಹಾಗೂ ಸಹಕಾರಿ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಶಾಸಕರಾದ ವೇದವ್ಯಾಸ ಕಾಮತ್, ಯಶ್‌ಪಾಲ್ ಎ.ಸುವರ್ಣ, ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ, ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಡಾ.ಸುರೇಂದ್ರ ಬಾಬು, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ,ರಾಜ್ಯ ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ.ಕುಮಾರ್, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಬಿ.ಜಯಕರ ಶೆಟ್ಟಿ ಇಂದ್ರಾಳಿ, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಸ್.ನವೀನ್, ಲಿಂಗರಾಜ್, ಮೈಸೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಜಯರಾಜ್ ರೈ, ಮೋನಪ್ಪ ಶೆಟ್ಟಿ, ಸದಾಶಿವ ಉಳ್ಳಾಲ್, ಸಿಇಒ (ಪ್ರಭಾರ) ಕೆ.ಗೋಪಾಲಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸಿಇಒ ಪೂರ್ಣಿಮಾ ಶೆಟ್ಟಿ, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಭಾಸ್ಕರ ಕೋಟ್ಯಾನ್ ಮೊದಲಾದವರಿದ್ದರು.
ಸಹಕಾರ ಮಾಣಿಕ್ಯ ಪ್ರಶಸ್ತಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಲಾ ಒಂದೊಂದು ಸಹಕಾರಿ ಸಂಘಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ಜತೆಗೆ 5 ಗ್ರಾಂ ಚಿನ್ನದ ಪದಕ ಹಾಗೂ 10 ಸಾವಿರ ರೂ. ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಎರಡು ಜಿಲ್ಲೆಗಳ ತಲಾ ಒಂದೊಂದು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಹೈನುಗಾರಿಕೆ ಕ್ರೆಡಿಟ್ ಸೊಸೈಟಿ, ಮೀನುಗಾರಿಕಾ ಸಹಕಾರಿ ಸಂಘ, ಸೌಹಾರ್ದ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ 1 ಹಾಗೂ ವಜ್ರ ಮಹೋತ್ಸವ ಮತ್ತು ಸುವರ್ಣ ಮಹೋತ್ಸವ ಪೂರೈಸಿದ ಸಂಘಗಳನ್ನು ಗೌರವಿಸಲಾಯಿತು. ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ದ.ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸ್ವಾಗತಿಸಿದರು. ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಜಿಲ್ಲೆಯವರೇ ಮಂತ್ರಿಗಳಾಗಲಿ
ಸಹಕಾರಿ ಸಪ್ತಾಹಕ್ಕೆ ಒಪ್ಪಿಕೊಂಡಿದ್ದ ಇಬ್ಬರು ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗೈರು ಹಾಜರಾಗಿದ್ದಾರೆ. ಮುಂದಿನ ವರ್ಷದ ಕಾರ್ಯಕ್ರಮಕ್ಕೆ ನಮ್ಮ ಜಿಲ್ಲೆಯವರೇ ಮಂತ್ರಿಗಳಾಗಿ ಬರಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ಈ ಬೇಡಿಕೆಯನ್ನು ಸಿಎಂ ಅವರ ಗಮನಕ್ಕೆ ತಲುಪಿಸುವುದಾಗಿ ಯು.ಟಿ.ಖಾದರ್ ಹೇಳಿದರು.
ಹಳ್ಳಿ ಹಳ್ಳಿಗಳಿಗೆ ತೆರಳಿ ಜನರಿಗೆ ಸೇವೆ ನೀಡಿದ ಕಾರಣ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಧ್ಯವಾಗದ ಕೆಲಸವನ್ನು ನಾವು ಮಾಡಿದ್ದೇವೆ. ಅರ್ಧ ದಿನದಲ್ಲಿ ಮದುವೆಗೂ ಸಾಲ ನೀಡುವ ವ್ಯವಸ್ಥೆ ನಮ್ಮಲ್ಲಿದೆ ಎಂದು ಡಾ.ರಾಜೇಂದ್ರ ಕುಮಾರ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net