ಉಪ್ಪಿನಂಗಡಿ: ಹತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣವೊಂದರ ವಾರಂಟ್ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಎನ್.ಆರ್.ಪುರದ ಮಾಗುಂಡಿ ನಿವಾಸಿ ಮಸೂದ್ ಯಾನೆ ಮಸೂರ ಬಂಧಿತ ಆರೋಪಿ. ಈತ ಇತರ ಮೂವರೊಂದಿಗೆ 2006ರ ಜು.26ರಂದು ಕೌಕ್ರಾಡಿಯ ವೈದ್ಯ ಶಿವಶಂಕರ್ ಶಾಸ್ತ್ರಿ ಎಂಬುವರ ಮನೆಗೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದು ಶಿವಶಂಕರ್ ಶಾಸ್ತ್ರಿ ಹಾಗೂ ಅವರ ಪತ್ನಿಯನ್ನು ಕಟ್ಟಿಹಾಕಿ ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 2,35,800 ಮೌಲ್ಯದ ಸೊತ್ತು ದೋಚಿದ್ದನು. ಈತನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2008ರಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈತ ಹೈಕೋರ್ಟ್‌ಗೆ ಅಪೀಲು ಮಾಡಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಹೈಕೋರ್ಟ್ ಆದೇಶದ ಮೇರೆಗೆ ಈತನನ್ನು ಸಿಪಿಐ ನಾಗರಾಜ್ ಎಚ್.ಇ. ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದಲ್ಲಿ ಹೆಡ್‌ಕಾನ್‌ಸ್ಟೆಬಲ್ ನಂಜುಂಡಯ್ಯ, ಪಿ.ಸಿ.ಮ್ಯಾಥ್ಯೂಸ್ ಎನ್.ಆರ್.ಪುರದಲ್ಲಿ ಬಂಧಿಸಿದ್ದಾರೆ.