ನಕಲಿ ಔಷಧ- ಕಲಬೆರಕೆ ಆಹಾರ ಪತ್ತೆಗೆ ಕಾವಲು ಪಡೆ ಸಚಿವ ಯು.ಟಿ.ಖಾದರ್

ಸಚಿವ ಯು.ಟಿ.ಖಾದರ್
ಸಚಿವ ಯು.ಟಿ.ಖಾದರ್
Published on

ಮಂಗಳೂರು : ರಾಜ್ಯದಲ್ಲಿ ನಕಲಿ ಔಷಧಿ ಜಾಲ ಹಾಗೂ ಆಹಾರ ಕಲಬೆರಕೆ, ಸ್ವಚ್ಛತೆಗೆ ಸಂಬಂಧಿಸಿ ಜನರಲ್ಲಿ ಜಾಗೃತಿ ಮೂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ನಿವೃತ್ತ ಹಾಗೂ ಪರಿಣಿತ ಹಿರಿಯ ನಾಗರಿಕರನ್ನು ಒಳಗೊಂಡ ಕಾವಲು ಪಡೆ (ವಾಚ್ ಟೀಂ)ಯನ್ನು ಪ್ರತಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಗುರುತಿಸಿ ಅವರಿಗೆ ಅಧಿಕಾರ ನೀಡುವ ಚಿಂತನೆ ಇದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು ರ್ಕೀಟ್ ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಕಲಿ ಜಾಲ ಪತ್ತೆ ಹಾಗೂ ಆಹಾರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದ ಜತೆಗೆ ಜಾಗೃತಿ ಅಗತ್ಯವಾಗಿದೆ ಎಂದರು.
ನಕಲಿ ಔಷಧ ಜಾಲ ಗಂಭೀರವಾಗಿದ್ದು, ಇದೊಂದು ದೊಡ್ಡ ಮಾಫಿಯಾ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಅನಧಿಕೃತ ಕಂಪನಿಗಳಿಂದ ಪೂರೈಕೆಯಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಜನೌಷಧಿ ಸೇರಿದಂತೆ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿ ಫೈಸ್ಟಾರ್ ಹೊಟೇಲ್‌ನಿಂದ ಹಿಡಿದು ತಳಮಟ್ಟದ ಬೀದಿ ಬದಿ ಆಹಾರ ಮಳಿಗೆಗಳಿಗೂ ದಾಳಿ ಮುಂದುವರಿಯುತ್ತಿದೆ. ಜನರು ದೂರು ನೀಡಿ ಕ್ರಮ ಆದಾಗ ಬದಲಾವಣೆ ಸಾಧ್ಯವಾಗುತ್ತದೆ. ದಾಳಿ ಅಥವಾ ಪರಿಶೀಲನೆಯ ಉದ್ದೇಶ ಯಾರಿಗೂ ಶಿಕ್ಷೆ ನೀಡುವುದಲ್ಲ. ಬದಲಿಗೆ ಅವರ ತಪ್ಪನ್ನು ತೋರಿಸಿ ಸರಿಪಡಿಸಲು ಅವಕಾಶ ನೀಡುವುದು. ಸದ್ಯ ದಾಳಿ ನಡೆಸಲಾಗಿರುವ ಎಲ್ಲಾ ಕಡೆಗಳಲ್ಲೂ ನೋಟೀಸು ಕೊಟ್ಟು ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.
ಹೊಟೇಲ್ ಅಸೋಸಿಯೇಶನ್, ಬೀದಿ ಬದಿ ಆಹಾರ ಮಾರಾಟಗಾರರನ್ನು ಜಿಲ್ಲಾ ಮಟ್ಟದಲ್ಲಿ ಸಭೆ ಕರೆಸಿ ಅವರಿಗೆ ಸ್ವಚ್ಛತೆ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹೊಟೇಲ್‌ಗಳಲ್ಲಿ ಅಡುಗೆ ಎಣ್ಣೆಯನ್ನು ಮರು ಬಳಕೆ ಮಾಡದೆ ಅದನ್ನು ಬಯೋ ಡೀಸೆಲ್ ಆಗಿ ಬಳಕೆ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net