_1763647434050.webp?w=480&auto=format%2Ccompress&fit=max)
_1763647434050.webp?w=480&auto=format%2Ccompress&fit=max)
ಮೂಡುಬಿದಿರೆ: ತಾಕೋಡೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಬುಧವಾರ ನಡೆಯಬೇಕಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಅರ್ಹ ಅಭ್ಯರ್ಥಿ ಎಂದು ಹೇಳಲಾದ ಓರ್ವ ಸದಸ್ಯೆಯನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ಕೆಲವು ನಿರ್ದೇಶಕರು ಮತ್ತು ಸದಸ್ಯರು ಪ್ರತಿಭಟನೆ ನಡೆಸಿದರು.
ಸೊಸೈಟಿಯ ಆಡಳಿತ ಮಂಡಳಿಯಲ್ಲಿ ಒಟ್ಟು 12 ನಿರ್ದೇಶಕರ ಸ್ಥಾನಗಳಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 7 ಸ್ಥಾನಗಳ ಬಹುಮತ ಅಗತ್ಯವಿತ್ತು. ಆದರೆ ಚುನಾವಣೆಯಲ್ಲಿ ಕೇವಲ 6 ಮಂದಿ ನಿರ್ದೇಶಕರು ಮಾತ್ರ ಭಾಗವಹಿಸಿದ್ದರಿಂದ, ಚುನಾವಣೆ ನಡೆಸಲು ಸಾಧ್ಯವಾಗಲಿಲ್ಲ. ಹಾಗಾಗಿ ಚುನಾವಣೆಯನ್ನು ಒಂದು ವಾರ ಕಾಲ ಮುಂದೂಡಲಾಗಿದೆ.
ಕೆಲವು ನಿರ್ದೇಶಕರು ತಮ್ಮ ಅಭ್ಯರ್ಥಿ ಆಕಾಂಕ್ಷಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ನಿರ್ದೇಶಕ ಯಶವಂತ್ ಶೆಟ್ಟಿ ಮಾತನಾಡಿ, ಅರ್ಹತೆ ಹೊಂದಿದ್ದರೂ ಸದಸ್ಯೆ ಪುಷ್ಪಾ ಅವರಿಗೆ ಸ್ಪರ್ಧಿಸುವ ಹಾಗೂ ಮತ ಚಲಾಯಿಸುವ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಸದಸ್ಯರೊಬ್ಬರು ಮತ ಚಲಾಯಿಸಿದ್ದಾರೆ. ನಿಯಮಾನುಸಾರ ಅರ್ಹತೆ ಇದ್ದರೂ, ಪರಿಶಿಷ್ಟ ಜಾತಿಯ ಮಹಿಳೆಗೆ ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿರುವುದು ಸಂಚು. ಸಂಬಂಧಪಟ್ಟವರು ಇದರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ಸೊಸೈಟಿಯಲ್ಲಿ ಕಳೆದ 15ಕ್ಕೂ ಅಧಿಕ ವರ್ಷಗಳಿಂದ ಚುನಾವಣೆ ನಡೆದಿಲ್ಲ. ಇಲ್ಲಿನ ಕಾರ್ಯದರ್ಶಿಗಳು ಆಡಳಿತ ಮಂಡಳಿಯನ್ನು ತಮ್ಮ ಕೈಗೊಂಬೆ ಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ಸದಸ್ಯ ಜಾಯ್ಲಸ್ ತಾಕೋಡೆ ಮಾತನಾಡಿ, ಸೊಸೈಟಿಯಲ್ಲಿ 10 ದಿನಗಳ ಹಿಂದೆ ನಡೆದ ನಿರ್ದೇಶಕ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ. ಹಿಂದೆ ಈ ಸೊಸೈಟಿಯು ಜಿಲ್ಲೆಯಲ್ಲೇ ಅತಿಹೆಚ್ಚು ಹಾಲು ಸಂಗ್ರಹಿಸುತ್ತಿದ್ದ ಸೊಸೈಟಿಯಾಗಿತ್ತು. ಆದರೆ ಇಲ್ಲಿನ ಅವ್ಯವಹಾರಗಳಿಂದ ಸೊಸೈಟಿಯು ಅಧಃಪತನದತ್ತ ಸಾಗಿದೆ ಎಂದು ಆರೋಪಿಸಿದರು.