ಕೊಚ್ಚೆಯಾಗುತ್ತಿದೆ ಪುತ್ತೂರು ತೋಡು Swachh Bharat

ಪುತ್ತೂರು ನಗರದ ತೋಡಿನಲ್ಲಿ ಕಂಡುಬಂದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳ ರಾಶಿ.
ಪುತ್ತೂರು ನಗರದ ತೋಡಿನಲ್ಲಿ ಕಂಡುಬಂದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳ ರಾಶಿ.
Published on

ಪ್ರಮುಖ ಮುಖ್ಯಾಂಶಗಳು

  • ಕುಡಿಯುವ ನೀರಿನ ಮೂಲಕ್ಕೆ ತ್ಯಾಜ್ಯ
  • ಅಧಿಕಾರಿಗಳ ಜಾಣಕುರುಡು
ಪುತ್ತೂರು: ಸ್ವಚ್ಛ ಭಾರತದ ಕಲ್ಪನೆಯಲ್ಲಿ ಗಾಂಧಿ ಜಯಂತಿಯಂದು ಅದ್ದೂರಿ ಕಾರ್ಯಕ್ರಮಗಳನ್ನು ನಡೆಸುವ ಸ್ಥಳೀಯಾಡಳಿತ ನಗರ ಸ್ವಚ್ಛತೆಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪುತ್ತೂರು ನಗರಸಭೆ ವ್ಯಾಪ್ತಿ ತೋಡುಗಳಲ್ಲಿ ರಾಶಿ ರಾಶಿ ತ್ಯಾಜ್ಯ ಕಣ್ಣಿಗೆ ರಾಚುತ್ತದೆ. ಅವೈeನಿಕ ತ್ಯಾಜ್ಯ ವಿಲೇವಾರಿಯಿಂದ ತೋಡುಗಳು ಕಲುಷಿತಗೊಳ್ಳುತ್ತಿದ್ದು ಇದರಿಂದ ಕುಡಿಯುವ ನೀರಿನ ಮೂಲವೂ ಮಲಿನಗೊಳ್ಳುತ್ತಿದೆ. ನಗರಸಭೆ ವ್ಯಾಪ್ತಿಯ ತೋಡುಗಳಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚುತ್ತಿದ್ದರೂ ಅಧಿಕಾರಿ ವರ್ಗ ಜಾಣ ಕುರುಡುತನ ತೋರುತ್ತಿದೆ.
ರೋಗ ಹರಡುವ ಭೀತಿ: ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ, ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ, ಆದರ್ಶ ಆಸ್ಪತ್ರೆಯ ಸಮೀಪ ಹೀಗೆ ವಿವಿಧ ಕಡೆಯಲ್ಲಿ ನೀರು ಹೋಗುವ ಮುಖ್ಯ ತೋಡಿಗೆ ತ್ಯಾಜ್ಯವನ್ನು ಎಸೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಜನರು ಒಂದು ಲೋಟ ನೀರು ತುಂಬಿಸಿಟ್ಟರೆ ಸೊಳ್ಳೆ ಉತ್ಪಾದನೆಯಾಗುತ್ತದೆ ಎಂದು ದಂಡ ವಿಧಿಸುವ ಅಧಿಕಾರಿಗಳು ಇಡೀ ಊರಿಗೇ ರೋಗ ಹರಡುವ ಭೀತಿ ಎದುರಾಗಿದ್ದರೂ ಇತ್ತ ಗಮನ ಹರಿಸುತ್ತಿಲ್ಲ.
ಪ್ರತಿ ವರ್ಷ ತೊಡು ಹೂಳೆತ್ತಲು ಲಕ್ಷಾಂತರ ರೂಪಾಯಿ ಅನುದಾನ ಮೀಸಲು ಇಡಲಾಗುತ್ತದೆ. ಆದರೆ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ. ಅಽಕಾರಿ ವರ್ಗವೂ ನಗರ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡದ ಕಾರಣ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ನಾಗರಿಕರ ಅನಾಗರಿಕ ವರ್ತನೆಗೆ ಕಡಿವಾಣ ಹಾಕುವವರೇ ಎಲ್ಲ ಎಂಬಂತಾಗಿದೆ.

ಕಡತದಲ್ಲಿ ಸ್ವಚ್ಛ ಪುತ್ತೂರು

ನಗರ ಸಭೆ ಶೂನ್ಯ ತ್ಯಾಜ್ಯ ಕಲ್ಪನೆಯಲ್ಲಿ ವಿವಿಧ ಯೋಜನೆಯನ್ನು ಹಾಕಿಕೊಂಡಿದೆ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಹೆಸರನ್ನು ಗಳಿಸಿ, ಪ್ರಾತ್ಯಕ್ಷಿಕೆ ಪಡೆಯುವ ನಿಟ್ಟಿನಲ್ಲಿ ವಿವಿಧ ಭಾಗದಿಂದ ಜನರು ಆಗಮಿಸುತ್ತಿದ್ದಾರೆ. ಆದರೆ ತೋಡು ರಸ್ತೆಯ ಬದಿಗಳಲ್ಲಿ ಕಸವನ್ನು ನೋಡಿ ಕಡತದಲ್ಲಿ ಮಾತ್ರ ಸ್ವಚ್ಛ ಪುತ್ತೂರು ಎಂದು ಹೀಯಾಳಿಸಿಕೊಂಡು ಹೋಗುವ ಕಾರ್ಯವಾಗುತ್ತಿದೆ.

ಕೋಟಿಯ ಯೋಜನೆ!

ಪುತ್ತೂರು ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ೧೦೦ ಕೋಟಿ ರೂಪಾಯಿಯ ಯೋಜನೆಯನ್ನು ಈಗಾಗಲೇ ಹಾಕಿಕೊಳ್ಳಲಾಗಿದೆ. ಕಾರ್ಯರೂಪಕ್ಕೆ ಬಂದರೆ ತೋಡುಗಳು ಸ್ವಚ್ಛವಾಗಲಿದೆ ಎಂಬ ಕಲ್ಪನೆ ಇಟ್ಟುಕೊಳ್ಳಲಾಗಿದೆ. ಆದರೆ ಜನರನ್ನು ಎಚ್ಚರಿಸುವ, ಜಾಗೃತಿಗೊಳಿಸುವ ಕಾರ್ಯ ಅಧಿಕಾರಿಗಳಿಂದ ನಡೆಯುತ್ತಿಲ್ಲ. ತ್ಯಾಜ್ಯ ಎಸೆಯುವವರ ಪತ್ತೆಗೆ ಅಗತ್ಯ ಕ್ರಮವಾಗುತ್ತಿಲ್ಲ.
"

ಪುತ್ತೂರಿನ ಹೃದಯಭಾಗದಲ್ಲಿ ಹರಿಯುವ ತೋಡನ್ನು ಸಾರ್ವಜನಿಕರು ಕಸದ ತೊಟ್ಟಿ ಎಂದು ಭಾವಿಸಿದ್ದಾರೆ. ಈ ತೋಡು ಮುಂದೆ ಉಪ್ಪಿನಂಗಡಿಯಲ್ಲಿ ಕುಮಾರಧಾರೆಯನ್ನು ಸೇರುತ್ತಿದೆ. ಇದೇ ನೀರನ್ನು ನೆಕ್ಕಿಲಾಡಿಯ ಅಣೆಕಟ್ಟಿನಿಂದ ಪಂಪಿಂಗ್ ಮಾಡಿ, ಕ್ವಿಂಟಾಲುಗಟ್ಟಲೆ ಕ್ಲೋರಿನ್ ಹಾಕಿ ಶುದ್ಧೀಕರಿಸಿ ಪುತ್ತೂರಿನ ಜನರಿಗೆ ಕುಡಿಯಲು ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net