ಸುಖಾನಂದ ಕೊಲೆ ಆರೋಪಿಗಳಿಗೆ ಆಶ್ರಯ - 19 ವರ್ಷ ತಲೆಮರೆಸಿಕೊಂಡ ಆರೋಪಿ ಬಂಧನ
ಅಬ್ದುಲ್ ಸಲಾಂ ಅಡ್ಡೂರು
Published on:
Copied
Follow Us
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಹೊಸಬೆಟ್ಟು ಬಳಿ 2006 ಡಿ.1ರಂದು ನಡೆದಿದ್ದ ಸುಖಾನಂದ ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಅಡ್ಡೂರು ಟಿಬೆಟ್ ಕಾಲೋನಿ ನಿವಾಸಿ ಅಬ್ದುಲ್ ಸಲಾಂ ಅಡ್ಡೂರು (47) ಬಂಧಿತ ಆರೋಪಿ. ಸುಖಾನಂದ ಕೊಲೆ ಆರೋಪಿಗಳಾದ ಕಬೀರ್ ಹಾಗೂ ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ ಅಡ್ಡೂರು ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ಅಡ್ಡೂರ್ ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಆಶ್ರಯ ನೀಡಿ 2 ದಿನ ಮನೆಯಲ್ಲಿರಿಸಿಕೊಂಡು ಪೊಲೀಸರಿಂದ ತಪ್ಪಿಸಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದರು. ನಂತರ ಕಬೀರ್ ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ನಂತರ ತಲೆ ಮರೆಸಿಕೊಂಡಿದ್ದರು. ಅಬ್ದುಲ್ ಸಲಾಂ ಅಡ್ಡೂರು ನು ಕೃತ್ಯ ನಡೆದ ಮೂರು ತಿಂಗಳ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಸದ್ರಿ ಆರೋಪಿತನು ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದರಿಂದ ಆರೋಪಿತನ ಮೇಲೆ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಅಬ್ದುಲ್ ಸಲಾಂ ಅಡ್ಡೂರು ಸುಮಾರು 19 ವರ್ಷಗಳಿಂದ ದಸ್ತಗಿರಿಗೆ ಸಿಗದೇ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಸದ್ರಿ ಆರೋಪಿಯ ಬಜಪೆ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಮಂಗಳವಾರ ಬಜಪೆ ಕಿನ್ನಿಪದವು ಬಳಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬರಲಾಗಿತ್ತು.
ಈತನು 2007ನೇ ಇಸವಿಯಲ್ಲಿ ಪಾಸ್ ಪೋರ್ಟ್ ಮಾಡಿ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಇತ್ತೀಚಿಗೆ ವಾಪಸ್ಸು ಬಂದಿದ್ದ. ಈತನು ಅಡ್ಡೂರಿನಲ್ಲಿರುವ ತನ್ನ ಮನೆಯನ್ನು ನೆಲಸಮಗೊಳಿಸಿ ಅಲ್ಲಿಂದ ಬಜಪೆಯ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. ಈತನ ಸಹೋದರ ಲತೀಫ್ ಅಡ್ಡೂರು ಈತನು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ 16 ಆರೋಪಿಗಳನ್ನು ಈ ಹಿಂದೆ ಬಂದಿಸಿದ್ದು ಉಳಿದ 11 ಜನ ಆರೋಪಿಗಳು ತಲೆಮರೆಸಿಕೊಂಡಿರುದ್ದಾರೆ.
ಈತನ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಬಜಪೆ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ. ಈತನ ಮೇಲೆ ನ್ಯಾಯಾಲಯದಿಂದ ಹಲವಾರು ಬಾರಿ ವಾರಂಟ್ ಗಳನ್ನು ಹೊರಡಿಸಿದ್ದು ಸದ್ರಿ ಆರೋಪಿಯು ಸುಮಾರು 19 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಈತನ ವಿರುದ್ಧ ಠಾಣೆಯಲ್ಲಿ ಕಲಂ 209 ಬಿಎನ್.ಎಸ್ ರಂತೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಎಸಿಪಿ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಪಿಎಸ್.ಐ ರಘುನಾಯಕ್ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ, ಸುನೀಲ್ ಕುಸನಾಳ ಕಾರ್ಯಾಚರಣೆ ನಡೆಸಿದ್ದರು.