

ಕಾಸರಗೋಡು: ತ್ರಿಶ್ಯೂರ್ ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿಯ ಮೃತದೇಹ ಕಾಸರಗೋಡಿನ ವಸತಿಗೃಹವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೊಡುಂಗಲ್ಲೂರು ಅಳೇಕೋಡು ತಾಪು ನಿವಾಸಿ, ಟಿ.ಮಹಮ್ಮದ್ ನಜೀರ್ ಎಂಬುವರ ಪುತ್ರ, ವೇಂಬಲೂರು ಶಾಲೆಯ ಟಿ.ಎಂ.ಅಬ್ದುಲ್ ನಿಹಾಲ್ ಮೃತ ವಿದ್ಯಾರ್ಥಿ. ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ನಗರದ ವಸತಿಗೃಹವೊಂದರಲ್ಲಿ ಅಬ್ದುಲ್ ನಿಹಾಲ್ ಬುಧವಾರ ಕೊಠಡಿ ಬಾಡಿಗೆಗೆ ಪಡೆದಿದ್ದು ಗುರುವಾರ ರಾತ್ರಿ ವಸತಿಗೃಹದ ಸಿಬ್ಬಂದಿ ಕೊಠಡಿ ಪರಿಶೀಲಿಸಿದಾಗ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಠಡಿಯಲ್ಲಿ ದೊರೆತ ಗುರುತಿನ ಚೀಟಿಯ ಆಧಾರದಲ್ಲಿ ಗುರುತು ಪತ್ತೆಹಚ್ಚಲಾಗಿದೆ. ಅಬ್ದುಲ್ ನಿಹಾಲ್ ನಾಪತ್ತೆಯಾಗಿರುವ ಬಗ್ಗೆ ಕೊಡಂಗಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಬುಧವಾರ ಬೆಳಗ್ಗೆ ಕೊಡಂಗಲ್ಲೂರಿನ ಟ್ಯೂಷನ್ ಕೇಂದ್ರಕ್ಕೆ ತೆರಳಿದ್ದ ನಿಹಾಲ್, ಅಲ್ಲಿಗೆ ಹೋಗದೆ, ಮನೆಗೂ ವಾಪಸಾಗದೆ ನಾಪತ್ತೆಯಾಗಿದ್ದ.