ಶ್ವಾನಗಳ ಉಪಟಳಕ್ಕೆ ಶಸ್ತ್ರಚಿಕಿತ್ಸೆ ಅಂಕುಶ

 ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಂತರ ಎರಡು ದಿನಗಳ ಕಾಲ ಆರೈಕೆ ಮಾಡಲಾಗುತ್ತದೆ
ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಂತರ ಎರಡು ದಿನಗಳ ಕಾಲ ಆರೈಕೆ ಮಾಡಲಾಗುತ್ತದೆ
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ದಿನಗಳೆದಂತೆ ಹೆಚ್ಚಾಗುತ್ತಿರುವ ಬೀದಿನಾಯಿಗಳ ಉಪಟಳ ನಿಯಂತ್ರಣ ಆಡಳಿತ ವಿಭಾಗಕ್ಕೆ ತಲೆನೋವಾಗಿ ಪರಿಣಮಿಸಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಮಹತ್ವಾಕಾಂಕ್ಷೆಯ ಹೆಚ್ಚೆ ಇಡಲಾಗಿದ್ದು, 250ಕ್ಕೂ ಅಧಿಕ ನಾಯಿಗಳನ್ನು ಯಶಸ್ವಿಯಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಸಮಸ್ಯೆ ನಿಯಂತ್ರಣಗೊಳ್ಳುವ ಭರವಸೆ ಮೂಡಿದೆ.
ದೇಶಿಯ ನಾಯಿಗಳ ಆರೋಗ್ಯ ಬಲವರ್ಧನೆ ಉದ್ದೇಶದಿಂದ ಬೈಂದೂರಿನಲ್ಲಿ ಮೊದಲ ಬಾರಿ ಮಧ್ವರಾಜ್ ಪ್ರಾಣಿ ಸಂತಾನ ಆರೈಕೆ ಟ್ರಸ್ಟ್ ಮತ್ತು ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್ ಇಂಡಿಯಾ ನೇತೃತ್ವದಲ್ಲಿ ಬೈಂದೂರು ರೋಟರಿ ಕ್ಲಬ್, ಇನ್ನರ್‌ವೀಲ್ ಸಹಕಾರದೊಂದಿಗೆ ಫ್ರೊಡೊ ಫೌಂಡೇಶನ್ ಜಂಟಿ ಕಾರ್ಯಾಚರಣೆ ಹಮ್ಮಿಕೊಂಡಿದೆ.
ಪ್ರಾಣಿ ಜನನ ನಿಯಂತ್ರಣ ಕಾಯ್ದೆ 2001ರ ಪ್ರಕಾರ ಸೆರೆಹಿಡಿದ ನಾಯಿಗಳನ್ನು ಹತ್ಯೆಮಾಡದೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ ಆರೈಕೆ ಮಾಡಲಾಗುತ್ತಿದೆ. ಎರಡು ದಿನಗಳ ನಿಗಾ ವಹಿಸುವಿಕೆ ನಂತರ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ. ಚಿಕಿತ್ಸೆಗೆ ಒಳಪಟ್ಟ ನಾಯಿಗಳ ಆರೋಗ್ಯ ವೃದ್ಧಿಗೊಳ್ಳಲಿದ್ದು, ಅವರ ಜೀವಿತಾವಧಿ ಕೂಡ 3ರಿಂದ 5 ವರ್ಷ ಹೆಚ್ಚಳವಾಗುತ್ತದೆ ಎಂದು ಪಶುವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೀದಿನಾಯಿಗಳ ರಕ್ಷಣಗೆ ಸ್ಥಳ ಮೀಸಲು

ಚಿಕಿತ್ಸಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಪ್ರತೀ ಊರುಗಳ ಕಸ ವಿಲೆವಾರಿ ಸ್ಥಳ, ಮದುವೆ ಹಾಲ್, ರೆಸಾರ್ಟ್, ಪ್ರಮುಖ ಬೀದಿಗಳಲ್ಲಿ ಬೀದಿನಾಯಿಗಳು ಹಿಂಡು ಹಿಂಡಾಗಿ ಕಾಣಸಿಗುತ್ತದೆ. ಇವುಗಳು ಕಾಯಿಲೆ ಅಥವಾ ಗಾಯಗಳಿಂದ ಬಳಲುತ್ತಿರುವುದು ಒಂದೆಡೆಯಾದರೆ ಇವುಗಳ ಸೆರೆಹಿಡಿಯಲು ಪರಿಣತರಾದ ಮಂದಿ ಸಿಗುತ್ತಿಲ್ಲ. ಹಲವು ಪಂಚಾಯಿತಿಗಳು ಈಗಾಗಲೇ ಎರಡೆರಡು ಬಾರಿ ಪ್ರಕಟಣೆ ಹೊರಡಿಸಿದ್ದರೂ ಪ್ರಯೋಜನವಾಗಿಲ್ಲ. ಒಂದೆರಡು ಕಡೆ ಇಬ್ಬರು ಸಿಬ್ಬಂದಿ ಇದ್ದು, ಅವರಿಗೆ ಭಾರಿ ಬೇಡಿಕೆ ಬರುತ್ತಿದೆ. ಬೈಂದೂರಿನಲ್ಲಿ ಬೀದಿನಾಯಿಗಳ ಸಂರಕ್ಷಣೆಗೆ ಜಾಗ ಕೂಡ ಮೀಸಲಿಡಲಾಗಿದೆ.

ಬೀದಿ ನಾಯಿಗಳನ್ನು ಸ್ಥಳಾಂತರಿಸುವುದರಿಂದ ಅವುಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲ. ಇಂತಹ ಕ್ರಮಗಳಿಂದ ಕೆಲವೇ ದಿನಗಳಲ್ಲಿ ಹೊಸ ನಾಯಿಗಳು ಸೇರಿಕೊಂಡು ಸಂತಾನೋತ್ಪತ್ತಿ ನಡೆಸಿ ತಮ್ಮ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಜನರಿಗೆ ತೊಂದರೆ ನೀಡುವ ಸಾಧ್ಯತೆಯಿದೆ, ಹೀಗಾಗಿ ಅವುಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡುವುದರಿಂದ ನಿಯಂತ್ರಣ ಸಾಧ್ಯವಾಗುತ್ತದೆ. ಈ ಚಿಕಿತ್ಸೆಯಿಂದ ನಾಯಿಗಳ ಸುರಕ್ಷತೆಗೂ ಸಹಕಾರಿ.

ಸಂತಾನಶಕ್ತಿ ಹರಣ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ತುಂಬಾ ತಯಾರಿ ಅವಶ್ಯಕತೆ ಇದೆ. ಪ್ರೋಡೋ ಫೌಂಡೇಶನ್ ಇದರ ಬಗ್ಗೆ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಸಮುದಾಯದಲ್ಲಿ ಮಕ್ಕಳ ಮತ್ತು ಹಿರಿಯರ ಮೇಲೆ ನಾಯಿಗಳಿಂದ ಆಗಬಹುದಾದ ದಾಳಿ ತಡೆಗಟ್ಟುವ ಹಾಗೂ ಭಾರತೀಯ ತಳಿಯ ನಾಯಿಗಳ ಆರೋಗ್ಯ ವಧರ್ನೆಗಾಗಿ ಸಂತಾನಶಕ್ತಿ ಹರಣ ಚಿಕಿತ್ಸಾ ಶಿಬಿರ ಒಂದು ಉತ್ತಮ ಪ್ರಯತ್ನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net