ಚತುಷ್ಪಥ ಕಾಮಗಾರಿಗೆ ತಡೆಯಾಜ್ಞೆ

ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಸ್ಥಗಿತಗೊಂಡಿರುವ ಚತುಷ್ಪಥ ಕಾಮಗಾರಿ.
ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಸ್ಥಗಿತಗೊಂಡಿರುವ ಚತುಷ್ಪಥ ಕಾಮಗಾರಿ.
Published on
ಪ್ರವೀಣ್‌ರಾಜ್ ಕೊಲ ಕಡಬ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್‌ನಿಂದ ಅಡ್ಡಹೊಳೆಯವರೆಗೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಬಹುಪಾಲು ಮುಕ್ತಾಯದ ಹಂತದಲ್ಲಿದೆ. ಈ ನಡುವೆ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಸುಮಾರು 400 ಮೀಟರ್ ರಸ್ತೆ ಕಾಮಗಾರಿಗೆ ನ್ಯಾಯಾಲಯದ ತಡೆಯಾಜ್ಞೆ ಅಡ್ಡಿಯಾಗಿದೆ.
ಆನೆದಾಟು ಸ್ಥಳದ ಆಯ್ಕೆ ವಿಚಾರದಲ್ಲಿ ಸ್ಥಳೀಯರು ನ್ಯಾಯಾಲಯದ ಮೊರೆ ಹೋದ ಕಾರಣ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪರ್ಯಾಯ ಆನೆದಾಟು ಸ್ಥಳ ಆಯ್ಕೆಯ ಅನಿವಾರ್ಯತೆ ತಲೆದೋರಿದೆ.
ಲಾವತ್ತಡ್ಕ ಎಂಬಲ್ಲಿ ಆನೆದಾಟು ಯೋಜನೆ ಜಾರಿಗೊಳಿಸುವ ವಿಚಾರವನ್ನು ಪ್ರಶ್ನಿಸಿ ಲಾವತ್ತಡ್ಕ ಕಳೆಂಜಾಲು ನಿವಾಸಿ ಹರಿಶ್ಚಂದ್ರ ಗೌಡ ಹಾಗೂ ರೆಖ್ಯ ಗ್ರಾಮದ ಮಯ್ಯಳಿ ನಿವಾಸಿ ಜೋಸ್ ಅವರು ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಹೈಕೋರ್ಟ್ ಉದ್ದೇಶಿತ ಜಾಗದಲ್ಲಿ ಆನೆದಾಟು ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಸುಮಾರು 400 ಮೀಟರ್ ಹೆದ್ದಾರಿ ಕಾಮಗಾರಿಯನ್ನು ಸ್ಥಗತಿಗೊಳಿಸಲಾಗಿದೆ. ಇಲ್ಲಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಅರ್ಜಿದಾರರ ವಾದ ಏನು?:

ಲಾವತಡ್ಕ ಪ್ರದೇಶ ಆನೆ ದಾಟು ನಿರ್ಮಿಸಲು ಸೂಕ್ತವಾದ ಸ್ಥಳವಲ್ಲ. ಲಾವತಡ್ಕದ ಕಳೆಂಜಾಲು ಸಂಪೂರ್ಣ ವಸತಿ ಪ್ರದೇಶವಾಗಿದ್ದು ಇಲ್ಲಿ ಆನೆ ದಾಟು ಮಾಡಿದರೆ ಆನೆಗಳು ನೇರವಾಗಿ ಮನೆಯಂಗಳಕ್ಕೆ ಬರುವ ಅಪಾಯವಿದೆ. ಕೃಷಿಗೂ ಹಾನಿ ಸಂಭಿಸುತ್ತದೆ. ಅಲ್ಲದೆ ಈ ಭಾಗದಲ್ಲಿ ಆನೆಗಳ ಸಂಚಾರವೂ ಇಲ್ಲ. ಆನೆಗಳು ಸಹಜವಾಗಿ ಸಾಗುವ ಹಾದಿಯಲ್ಲಿ ಆನೆದಾಟು ಮಾಡಬೇಕೇ ಹೊರತು, ಆನೆಗಳು ಸಂಚರಿಸದ ಜನವಸತಿ ಪ್ರದೇಶದಲ್ಲಿ ಮಾಡಿದಲ್ಲಿ ಆನೆಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಲಾವತ್ತಡ್ಕದ ಒಂದು ಬದಿ ಮೀಸಲು ಅರಣ್ಯವಾಗಿದ್ದರೂ ಮತ್ತೊಂದು ಬದಿಯಲ್ಲಿ ನದಿ ಇದೆ. ಬಾಳೆಮಾರು, ಅಡೆಂಜಬೈಲು, ಕಲ್ಲುಗುಡ್ಡೆ, ಕೋಣಾಜೆ ಸೇರಿದಂತೆ 400ಕ್ಕೂ ಹೆಚ್ಚು ಮನೆಗಳು, ದೇವಾಲಯ, ಶಾಲೆ ಇದೆ. ಇಲ್ಲಿ ಆನೆದಾಟು ರಚಿಸುವುದು ಸಂಪೂರ್ಣ ಅವೈಜ್ಞಾನಿಕ ಎಂಬುದು ಅರ್ಜಿದಾರರ ವಾದವಾಗಿದೆ.

ಮೂಲ ಯೋಜನೆ ಬದಲಾವಣೆ ಆರೋಪ

ಮೂಲ ಯೋಜನಾ ವರದಿ ಪ್ರಕಾರ, ಹೆದ್ದಾರಿಯು ಲಾವತ್ತಡ್ಕ ಪೇಟೆಯಿಂದ ನೇರವಾಗಿ ಸಾಗಬೇಕಾಗಿತ್ತು. ಅಲ್ಲಿಂದ 1 ಕಿ.ಮೀ. ದೂರದಲ್ಲಿ ಎರಡೂ ಬದಿ ರಕ್ಷಿತಾರಣ್ಯವಿರುವ ಪ್ರದೇಶವನ್ನು ಆನೆ ದಾಟು ಎಂದು ಗುರುತಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಈ ಭಾಗದಲ್ಲಿ ಬಂಡೆಕಲ್ಲು ಇದೆ ಎಂಬ ಕಾರಣಕ್ಕೆ ಆನೆದಾಟು ಸ್ಥಳ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಮ್ಮ ಆಕ್ಷೇಪ ಆನೆ ದಾಟಿಗೆ ಆಯ್ಕೆ ಮಾಡಲಾದ ಸ್ಥಳದ ವಿರುದ್ಧ ಮಾತ್ರ. ಈ ಜಾಗದಲ್ಲಿ ಆನೆ ದಾಟು ನಿರ್ಮಿಸಿದರೆ ಜನರಿಗೆ ಮತ್ತು ಕೃಷಿಗೆ ಅಪಾಯವಿದೆ. ರಸ್ತೆ ಕಾಮಗಾರಿಗೆ ನಾವು ಯಾವುದೇ ಆಕ್ಷೇಪ ಮಾಡಿಲ್ಲ.

ಸಾರ್ವಜನಿಕ ವಿರೋಧದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಎನ್‌ಎಚ್‌ಎಐ ಜಂಟಿಯಾಗಿ ಪರ್ಯಾಯ ಜಾಗ ಪರಿಶೀಲನೆ ಮಾಡಿದ್ದೇವೆ. ಪೆರಿಯಾಶಾಂತಿ-ಹೊಸಮಜಲು ನಡುವಿನ ಮಣ್ಣಗುಂಡಿ ಭಾಗ ಆನೆ ದಾಟಿಗೆ ಸೂಕ್ತ ಎಂದು ಕಂಡುಕೊಳ್ಳಲಾಗಿದೆ. ಆದರೆ ಮಣ್ಣಗುಂಡಿಯಲ್ಲಿ ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣವಾಗಿದೆ. ಮೇಲ್ಸೇತುವೆ ಮಾದರಿಯಲ್ಲಿ ಅರಣ್ಯದ ಎರಡೂ ಬದಿಗಳನ್ನು ಸಂಪರ್ಕಿಸಿ ಆನೆ ದಾಟು ನಿರ್ಮಿಸಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net