

ವಿಜಯವಾಣಿ ಸುದ್ದಿಜಾಲ ಕುಂಬಳೆ
ಗಡಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿರುವ ಕಾಸರಗೋಡಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಸಮಗ್ರ ನವೀಕರಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಎಸ್ಕಲೇಟರ್ ಹಾಗೂ ಅತ್ಯಾಧುನಿಕ ತುರ್ತು ಚಿಕಿತ್ಸಾ ಕೊಠಡಿ ಶ್ರೀದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ಪ್ರಮುಖ ದೂರದೂರಿನ ರೈಲುಗಳ ನಿಲುಗಡೆ ಹೊಂದಿರುವ ಈ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ.
ಅಮೃತ್ ಭಾರತ್ ಯೋಜನೆಯಡಿ ಸುವಾರು 50 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣದ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರ ಭಾಗವಾಗಿ ಪಾದಚಾರಿ ಮೇಲ್ಸೇತುವೆಯಲ್ಲಿ 4.16 ಕೋಟಿ ರೂ. ವೆಚ್ಚದಲ್ಲಿ ಎಸ್ಕಲೇಟರ್ ಅಳವಡಿಸಲಾಗುತ್ತಿದೆ. ಆರಂಭಿಕ ಸಿವಿಲ್ ಕಾಮಗಾರಿಗಳನ್ನು ಪಾಲಕ್ಕಾಡ್ ರೈಲ್ವೆ ವಿಭಾಗ ಪೂರ್ಣಗೊಳಿಸಿದ್ದು, ಗುತ್ತಿಗೆ ಕಂಪನಿ ಸದ್ಯ ಯಂತ್ರಭಾಗಗಳ ಜೋಡಣೆಯಲ್ಲಿ ತೊಡಗಿದೆ. ಈ ಕಾರ್ಯ ಪೂರ್ಣಗೊಂಡ ಬಳಿಕ ಎಸ್ಕಲೇಟರನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2023ರ ಆಗಸ್ಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಎಸ್ಕಲೇಟರ್ ಸೌಲಭ್ಯವನ್ನು ಸದ್ಯ ಫ್ಲಾೃಟ್ಫಾರ್ಮ್ ಒಂದರ ಬದಿಗೆ ಮಾತ್ರ ಸೀಮಿತಗೊಳಿಸಿರುವುದು ಪ್ರಯಾಣಿಕರ ಅಸವಾಧಾನಕ್ಕೆ ಕಾರಣವಾಗಿದೆ. ಮೇಲ್ಸೇತುವೆಯ ಇನ್ನೊಂದು ಬದಿಯಲ್ಲೂ ಎಸ್ಕಲೇಟರ್ ಅಳವಡಿಸಿದರೆ ಪ್ರಯಾಣಿಕರಿಗೆ, ವಿಶೇಷವಾಗಿ ಲಗೇಜು ಹೊತ್ತವರಿಗೆ ಅನುಕೂಲವಾಗಲಿದೆ ಎಂದು ಕಾಸರಗೋಡು ಜಿಲ್ಲಾ ರೈಲ್ವೆ ಪ್ರಯಾಣಿಕರ ಸಂದ ಸಂಚಾಲಕ ನಿಸಾರ್ ಪೆರುವಾಡ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಯೇನೆಪೊಯ ವಿಶ್ವವಿದ್ಯಾಲಯದ (ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ) ಸಹಯೋಗದಲ್ಲಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಯೇನ್ಕೇರ್ ತುರ್ತು ಚಿಕಿತ್ಸಾ ಕೊಠಡಿ ಆರಂಭಿಸಲಾಗುತ್ತಿದೆ. ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ಹೃದಯಾಘಾತ ಅಥವಾ ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಗೋಲ್ಡನ್ ಅವರ್ನಲ್ಲಿ ತ್ವರಿತವಾಗಿ ಜೀವ ರಕ್ಷಕ ಪ್ರಾಥಮಿಕ ಚಿಕಿತ್ಸೆ ಒದಗಿಸುವುದು ಇದರ ಉದ್ದೇಶ. ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲೂ ಇದೇ ರೀತಿಯ ವ್ಯವಸ್ಥೆ ಜಾರಿಯಾಗುತ್ತಿದೆ. ಇದರಿಂದ ಗಡಿ ಭಾಗದ ಪ್ರಯಾಣಿಕರಿಗೂ ತುರ್ತು ಸಂದರ್ಭದಲ್ಲಿ ನೆರವು ದೊರೆಯಲಿದೆ.
ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳು ನಿಗದಿತ ಸಮಯದೊಳಗೆ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ. ಎಸ್ಕಲೇಟರ್, ಲಿಫ್ಟ್ ಹಾಗೂ ತುರ್ತು ಚಿಕಿತ್ಸಾ ಕೊಠಡಿಗಳು ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅತ್ಯಂತ ಅಗತ್ಯವಾಗಿವೆ. ರೈಲ್ವೆ ಇಲಾಖೆ ವಿಳಂಬ ಮಾಡದೆ ನಿಗದಿತ ಗಡುವಿನೊಳಗೆ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಬೇಕು ಎಂದು ರೈಲ್ವೆ ನಿಲ್ದಾಣ ಸಲಹಾ ಸಮಿತಿ ಸದಸ್ಯ ಫಾರೂಕ್ ಖಾಸ್ತಿ ಒತ್ತಾಯಿಸಿದ್ದಾರೆ.