

ಮೂಡುಬಿದಿರೆ: ಯಕ್ಷಗಾನ ರಂಗದಲ್ಲಿ ಮಹಿಳೆಯರು ಗುಣಮಟ್ಟದೊಂದಿಗೆ ಮುನ್ನಡೆ ಸಾಧಿಸುವವರಿಗೆ ಲೀಲಾವತಿ ಬೈಪಾಡಿತ್ತಾಯ ಆದರ್ಶ. ಯಕ್ಷಗಾನದ ಹಿಮ್ಮೇಳದಲ್ಲಿ ಚೆಂಡೆಯ ಅಬ್ಬರದಿಂದ ಮದ್ದಲೆ ನೇಪಥ್ಯಕ್ಕೆ ಸರಿಯುತ್ತಿದೆ. ಪಂಚವಾದ್ಯಗಳೂ ಮೂಲೆಗುಂಪಾಗಲು ಚೆಂಡೆಯೇ ಕಾರಣವಾಗಿದೆ. ಚೆಂಡೆಯ ಬಳಕೆಯನ್ನು ಮಿತಗೊಳಿಸದಿದ್ದರೆ ಭವಿಷ್ಯದಲ್ಲಿ ಮದ್ದಲೆಯು ಯಕ್ಷಗಾನದಿಂದ ಕಣ್ಮರೆಯಾಗಬಹುದು ಎಂದು ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು.
ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಳದ ಆವರಣದಲ್ಲಿ ಮಂಗಳವಾರ ಆಯೋಜಿಸಲಾದ 5ನೇ ವರ್ಷದ ಯಕ್ಷ ನಾದೋತ್ಸವ, ಪ್ರಶಸ್ತಿ ಪ್ರದಾನ, ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನದ ಗುರು ದಂಪತಿ ಲೀಲಾವತಿ ಬೈಪಾಡಿತ್ತಾಯ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ ವತಿಯಿಂದ ಹಿರಿಯ ಮೇರು ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷ ನಾದೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಭಿನಂದನಾ ಭಾಷಣ ಮಾಡಿದ ಯಕ್ಷಗಾನ ಕಲಾವಿದ ವಾಸುದೇವ ರಂಗ ಭಟ್, ಚೆಂಡೆ ಯಕ್ಷಗಾನದ ಭಾಗವಾಗಿ ಬಂದಿದ್ದು ಇದರ ಬಳಕೆಯ ಕುರಿತು ಅಭ್ಯಾಸಿ ವಲಯದಲ್ಲಿ ಚರ್ಚೆಯಾಗಲಿ ಎಂದರು. ಶಂಕರನಾರಾಯಣ ಭಟ್-ವನಜಾಕ್ಷಿ ಭಟ್ ಅವರನ್ನು ಗೌರವಿಸಲಾಯಿತು.
ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶ್ರೀಕ್ಷೇತ್ರ ಕಟೀಲಿನ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಉದ್ಯಮಿ ಕೆ.ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿದ್ದರು. ಹರಿನಾರಾಯಣ ಬೈಪಾಡಿತ್ತಾಯ ಉಪಸ್ಥಿತರಿದ್ದರು.
ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈತ್ರಿ ಭಟ್ ಸನ್ಮಾನ ಪತ್ರ ವಾಚಿಸಿದರು. ಚೇತನ್ ಕತ್ತಲ್‌ಸಾರ್ ವಂದಿಸಿದರು. ಚಂದ್ರಶೇಖರ್ ಕೊಂಕಣ್ಣಾಯ ಹಾಗೂ ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.