

ವಿಜಯವಾಣಿ ಸುದ್ದಿಜಾಲ ಕಡಬ
ಹೆಣ್ಣು ಮಕ್ಕಳು ಸಾಧನೆ ಮಾಡುವುದರಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಧನಲಕ್ಷ್ಮೀ ಅವರ ಸಾಧನೆ ಇಡೀ ದೇಶವೇ ಹೆಮ್ಮೆ ಪಡುವಂಥದ್ದು. ಇವರ ಸಾಧನೆ ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಆಲಂಕಾರು ಗ್ರಾಮದ ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ವಿಶ್ವ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತರಾದ ಧನಲಕ್ಷ್ಮೀ ಅವರನ್ನು ಆಲಂಕಾರು ಪೇಟೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಶಾಲಾ ಕ್ರೀಡಾಕೂಟಕ್ಕೆ ಸ್ವಾಗತಿಸಲಾಯಿತು. ನಂತರ ನಡೆದ ಪಥ ಸಂಚಲನದಲ್ಲಿ ಧನಲಕ್ಷ್ಮೀ ಗೌರವ ವಂದನೆ ಸ್ವೀಕರಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ರೈ ಮನವಳಿಕೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಂದಾಳು ಜನಾರ್ದನ ಕಯ್ಯಪೆ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಚಂದ್ರಶೇಖರ ಮಾತನಾಡಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ, ಸದಸ್ಯರಾದ ವಿಜಯ ಕುಮಾರ್ ರೈ ಮನವಳಿಕೆ, ಮುತ್ತಪ್ಪ ಪೂಜಾರಿ ನೈಯ್ಯಲ್ಗ, ತಾರಾನಾಥ ರೈ ನಗ್ರಿ, ಹೇಮಂತ್ ರೈ ಮನವಳಿಕೆ, ಇಂದುಶೇಖರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ್‌ಗೌಡ, ಆಡಳಿತಾಧಿಕಾರಿ ಶ್ರೀಪತಿ ರಾವ್, ಪ್ರಾಂಶುಪಾಲೆ ರೂಪಾ ಜಿ.ರೈ, ಮುಖ್ಯಗುರು ನವೀನ್ ರೈ ಉಪಸ್ಥಿತರಿದ್ದರು. ಶಿಕ್ಷಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೇಯಸ್ಸು ರೈ ವಂದಿಸಿದರು.