ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಬಾಹ್ಯಾಕಾಶ ಸಪ್ತಾಹ

ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಗುಣ ಅಗತ್ಯ ಡಾ. ಸಿ.ಎಸ್ ಮಧುಸೂದನ್ ಹೇಳಿಕೆ
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ  ಬಾಹ್ಯಾಕಾಶ ಸಪ್ತಾಹವನ್ನು ಡಾ. ಸಿ.ಎಸ್ ಮಧುಸೂದನ್ ಉದ್ಘಾಟಿಸಿದರು. ಪ್ರೊ. ಜಿ.ಶ್ರೀನಿಕೇತನ್,  ಡಾ.ಅರುಣ್ ಕುಮಾರ್ ಶೆಟ್ಟಿ ಎನ್.  ಮೊದಲಾದವರಿದ್ದರು.
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಬಾಹ್ಯಾಕಾಶ ಸಪ್ತಾಹವನ್ನು ಡಾ. ಸಿ.ಎಸ್ ಮಧುಸೂದನ್ ಉದ್ಘಾಟಿಸಿದರು. ಪ್ರೊ. ಜಿ.ಶ್ರೀನಿಕೇತನ್, ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಮೊದಲಾದವರಿದ್ದರು.
Published on: 

ಮಂಗಳೂರು: ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ಪರಿಶೀಲಿಸುವ ಹಾಗೂ ಸಾಕ್ಷ್ಯಾಧಾರಿತವಾಗಿ ಚಿಂತಿಸುವ ಮನೋಭಾವ ಬೆಳೆಸಬೇಕು. ತಂತ್ರಜ್ಞಾನ ಮಿತ ಬಳಕೆ ಮಾಡಿ ಪುಸ್ತಕದಲ್ಲಿರುವ ವಿದ್ಯೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೂ ಬಾಹ್ಯಾಕಾಶದ ಬಗ್ಗೆ ಅಪಾರ ಜ್ಞಾನ ಪಡೆದು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ. ಸಿ.ಎಸ್ ಮಧುಸೂದನ್ ಹೇಳಿದರು.

ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ ಹಾಗೂ ಇಸ್ರೋ ಸಹಯೋಗದೊಂದಿಗೆ ವಿಶ್ವ ಬಾಹ್ಯಾಕಾಶ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಎನ್.ಐ.ಟಿ.ಕೆ ಸುರತ್ಕಲ್‌ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಶ್ರೀನಿಕೇತನ್ ಮಾತನಾಡಿ, ರಾಕೆಟ್ ತಂತ್ರಜ್ಞಾನದಲ್ಲಿನ ನಿರಂತರ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿವೆ. ಈ ‘ರಾಕೆಟ್ ಕ್ರಾಂತಿ’ಯ ಮೂಲಕ ಭಾರತವು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದೆ ಎಂದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಸಿತ ಭಾರತದ ನಿರ್ಮಾಣಕ್ಕಾಗಿ ನವೀನ ಆಲೋಚನೆಗಳು, ತಂತ್ರಜ್ಞಾನ ಮತ್ತು ಪರಸ್ಪರ ಸಹಯೋಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದರು.

ಸ್ವಾಮಿ ವಿವೇಕಾನಂದ ತಾರಾಲಯದ ಪಕ್ಕದ ಗ್ಯಾಲರಿಯಲ್ಲಿ ಇಸ್ರೋ ವತಿಯಿಂದ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಮಾದರಿಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ವಿಶೇಷವಾಗಿ ತಾರಾಲಯದಲ್ಲಿ ವಿದ್ಯಾರ್ಥಿಗಳಿಗೆ ದಿ ಮೂನ್ ಎಂಬ 2ಡಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಷ್ಠಿತ ಇಸ್ರೋದ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ಉಪಗ್ರಹ ಮಾದರಿಗಳ ತಯಾರಿಕೆಯ ಸ್ಪರ್ಧೆಯನ್ನು ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ದ.ಕ.ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಡಿಪ್ಲೊಮ ಕಾಲೇಜಿನ ಸುಮಾರು 750 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದರು.

ವೀರೇಂದ್ರ ಆರ್ ಕವಿ ಶೆಟ್ಟಿ ಉಪಸ್ಥಿತರಿದ್ದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಕೆ.ಆರ್ ಸ್ವಾಗತಿಸಿ, ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ವಂದಿಸಿದರು. ಶೈಕ್ಷಣಿಕ ಸಹಾಯಕಿ ಚಂಚಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net