

ಮಂಗಳೂರು: ದೇಶದಲ್ಲೇ ತಲ್ಲಣ ಸೃಷ್ಟಿಸಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದೆ. ಶನಿವಾರ ಎಸ್ಐಟಿ ತಂಡವು ಸೌಜನ್ಯ ಅವರ ಶವ ಪತ್ತೆಯಾದ ಧರ್ಮಸ್ಥಳದ ಬಳಿಯ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ.
ಎಸ್ಐಟಿ ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಕ್ರೈಂ ಸೀನ್ ಮರುಸೃಷ್ಟಿಸಿ ತನಿಖೆ ಪ್ರಕ್ರಿಯೆ ನಡೆದಿದೆ. ಧರ್ಮಸ್ಥಳದ ಮಣ್ಣಸಂಕದ ಕಾಡಿನಲ್ಲಿ ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಸ್ಥಳಕ್ಕೆ ತನಿಖಾಧಿಕಾರಿಗಳು ಭೇಟಿ ನೀಡಿದ್ದು, ಈ ವೇಳೆ ಸೌಜನ್ಯ ಕುಟುಂಬಸ್ಥರು ಸ್ಥಳವನ್ನು ಗುರುತಿಸಿ ತನಿಖಾ ತಂಡಕ್ಕೆ ಮಾಹಿತಿ ನೀಡಿದರು. ಡಿವೈಎಸ್ಪಿ ಮನೋಜ್ ಕುಮಾರ್ ನಾಯ್ಕ ತನಿಖೆ ನಡೆಸಿದರು.
ಸೌಜನ್ಯ ಅವರ ಸಂಬಂಧಿಕರಾದ ಪುರಂದರ ಗೌಡ ಮತ್ತು ತುಕಾರಾಂ ಅವರಿಂದ ಮಾಹಿತಿ ಸಂಗ್ರಹಿಸಿದರು. ಸ್ಥಳ ಪರಿಶೀಲನೆ ವೇಳೆ ಎಸ್ಐಟಿ ತಂಡದ ಜತೆ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬೆಂಗಳೂರು ಎಫ್ಎಸ್ಎಲ್ ತಂಡ, ಸೋಕೋ ತಂಡ, ಗ್ರಾಮ ಆಡಳಿತಾಧಿಕಾರಿ, ಪಂಚರು, ವೈದ್ಯರು ಹಾಗೂ ಫೋಟೊ ಮತ್ತು ವಿಡಿಯೋ ದಾಖಲಾತಿ ತಂಡ ಸ್ಥಳಕ್ಕೆ ಆಗಮಿಸಿತ್ತು. ತನಿಖೆಗೆ ಅಗತ್ಯವಾದ ಸಾಕ್ಷೃ ಮತ್ತು ಮಾಹಿತಿಗಳನ್ನು ಸಂಗ್ರಹಿಸುವ ಪ್ರಕ್ರಿಯೆ ನಡೆದಿದೆ. ಶವ ಸಿಕ್ಕ ಸ್ಥಳದಿಂದ ಮಣ್ಣಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿದ ಎಸ್ಐಟಿ ಅಧಿಕಾರಿಗಳು ಎಫ್ಎಸ್ಎಲ್ ಗೆ ನೀಡಿದರು. ಅಲ್ಲಿಯೇ ದಾಖಲಿಸಿ ಅದನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ. ಸ್ಥಳದಲ್ಲಿ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಈ ಹಿಂದೆ ಸಿಬಿಐ ತನಿಖೆ ನಡೆಸುವಾಗ ಘಟನಾ ಸ್ಥಳಕ್ಕೆ ಭೇಟಿ ನೀಡದೆ ತನಿಖೆಯನ್ನು ಪೂರ್ಣಗೊಳಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಸಿಬಿಐನ ಈ ಲೋಪದ ಬಗ್ಗೆ ಪ್ರಶ್ನಿಸಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಸಿಬಿಐ ಮಾಡಿದ ತಪ್ಪನ್ನು ಮರುತನಿಖೆಯಲ್ಲಿ ಪುನರಾವರ್ತಿಸದೆ, ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಎಸ್ಐಟಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 14 ವರ್ಷಗಳ ಹಿಂದಿನ ಪ್ರಕರಣದ ಮರು ತನಿಖೆಯಲ್ಲಿ ಮೃತದೇಹ ಪತ್ತೆಯಾದ ಸ್ಥಳದಲ್ಲೇ ತನಿಖೆ ಆರಂಭಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.