

ಬೆಳ್ತಂಗಡಿ: ಸದಾಶಿವ ಶೆಟ್ಟಿಗಾರ್ ಯಕ್ಷಗಾನ ಕ್ಷೇತ್ರದಲ್ಲಿ ಮರೆಯಲಾಗದ ಮಹಾನ್ ದೈತ್ಯ ಪ್ರತಿಭೆ. ಬಣ್ಣದ ಮಾಲಿಂಗರ ಗರಡಿಯಲ್ಲಿ ಪಳಗಿದ ಅವರು ಬಣ್ಣಗಾರಿಕೆ, ಸ್ಪಷ್ಟ ಮಾತುಗಳಿಂದ ತನ್ನದೇ ಛಾಪನ್ನು ಮೂಡಿಸಿದ್ದರು. ಮುಂದಿನ ಜನಾಂಗ ಅವರ ಪರಂಪರೆ ಉಳಿಸಬೇಕಾಗಿದೆ ಎಂದು ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು.
ಶ್ರೀ ಕ್ಷೇತ್ರ ಪೂಂಜ ಸಿದ್ದಕಟ್ಟೆ ಯಕ್ಷಮಿತ್ರರು ಸಂಘಟನೆಯ 8ನೇ ವಾರ್ಷಿಕೋತ್ಸವ ಪ್ರಯುಕ್ತ ಬಣ್ಣದ ವೇಷಧಾರಿ ದಿ.ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಹಾಗೂ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಕ್ಷೇತ್ರ ಪೂಂಜ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ ಹಕ್ಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರಿಂಕಿಜಿ ಅಧ್ಯಕ್ಷತೆ ವಹಿಸಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಪೆರಿಂಜೆ ಅವರಿಗೆ ಸಿದ್ದಕಟ್ಟೆ ಯಕ್ಷ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ಕ್ಷೇತ್ರ ಪೂಂಜದ ಕೃಷ್ಣ ಪ್ರಸಾದ್ ಆಸ್ರಣ್ಣ, ರೋಟರಿ ಕ್ಲಬ್ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಸಮಿತಿ ಪದಾಧಿಕಾರಿ ಉಮೇಶ್ ಹಿಂಗಾಣಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸಚ್ಚಿದಾನಂದ ಭಟ್, ಡಾ.ಯೋಗೀಶ್ ಕೈರೋಡಿ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಸ್ವಾಗತಿಸಿದರು. ಗಣೇಶ್ ಶೆಟ್ಟಿ ವಂದಿಸಿದರು. ಉಮೇಶ್ ಪಾಳ್ಯ ನಿರೂಪಿಸಿದರು.