ಮಂಗಳೂರು: ಬಡವರ ಮತ್ತು ಅಶಕ್ತರ ಬದುಕಿಗೆ ಬೆಳಕು ನೀಡುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಶಾರದಾ ರಾಮರಾವ್ ಟ್ರಸ್ಟ್ ಕಳೆದ 14 ವರ್ಷಗಳಿಂದ ನಿರಂತರವಾಗಿ ಮಾನವೀಯ ಸೇವೆ ಮಾಡುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ರವೀಂದ್ರ ರಾವ್ ಹೇಳಿದರು.
ನಗರದ ಬಿಜೈ ಬಾರೆಬೈಲ್‌ನಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲಿ ಭಾನುವಾರ ನಡೆದ 14ನೇ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿನ ಅಶಕ್ತರನ್ನು ಯಾವುದೇ ಜಾತಿ, ಧರ್ಮ ನೋಡದೆ ಗುರುತಿಸಿ ಅವರಿಗೆ ಸಹಾಯಹಸ್ತ ನೀಡಲಾಗಿದೆ. ತ್ಯಾಗ, ಸೇವಾ ಮನೋಭಾವನೆ, ಮಾನವೀಯತೆ, ಪರೋಪಕಾರ ತತ್ವದ ಧ್ಯೇಯದಲ್ಲಿ ಟ್ರಸ್ಟ್ ಮುನ್ನಡೆಯುತ್ತಿದೆ ಎಂದರು,.
ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ಪಿ.ಶೋಭಾ ರಾವ್ ಟ್ರಸ್ಟ್‌ನ ಚಟುವಟಿಕೆಗಳನ್ನು ಪ್ರಕಟಿಸಿದರು.
ತುಳು ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ ಆರ್ಯನ್ ಎಸ್. ಹಾಗೂ ಹುಲಿ ವೇಷ, ನೃತ್ಯ ಪ್ರತಿಭೆ ಪ್ರತೀಕ್ ಅವರನ್ನು ಪುರಸ್ಕರಿಸಲಾಯಿತು. ಕೂಲಿ ಕೆಲಸ ಮಾಡಿ ಪದವೀಧರನಾದ ಹಾಗೂ ಕಣ್ಣಿನ ಸಮಸ್ಯೆ ಹೊಂದಿರುವ ಸಂಜಯ್ ಹಾಗೂ ಕಿಡ್ನಿ ಸಮಸ್ಯೆಯ ವ್ಯಕ್ತಿಗೆ ಡಯಾಲಿಸಿಸ್‌ಗೆ ಸಹಾಯ ನೀಡಲಾಯಿತು.
ಪ್ರಮುಖರಾದ ಅವಿನಾಶ್ ರಾವ್, ಅಂಬಾ ಕಾಮತ್, ಉಷಾ ರಾವ್, ಮಲ್ಲಿಕಾ, ಕಾರ್ತಿಕ್ ಪಿ., ಮಲ್ಲಿಕಾ ಸತೀಶ್ ರಾವ್ ಮತ್ತು ಶುಭಾ ರಾವ್ ಉಪಸ್ಥಿತರಿದ್ದರು.
ಟ್ರಸ್ಟಿಗಳಾದ ಪಿ.ವಸಂತಿ ರಾವ್ ಪ್ರಸ್ತಾವನೆಗೈದರು. ಪಿ.ಜಯಂತಿ ರಾವ್ ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು. ಪಿ.ಸುರೇಂದ್ರ ರಾವ್ ವಂದಿಸಿದರು.