ರಸ್ತೆಯಲ್ಲೇ ಮನೆಗಳ ಶೌಚಗುಂಡಿ!

ಕೋಟೆಕಾರ್‌ನಲ್ಲಿ ಬಿಲ್ಡರ್‌ಗಳಿಂದ ಅವಾಂತರ
ಮಾತೃಶ್ರೀ ಬಡಾವಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಕ್ಕಿ ಹರಿಯುತ್ಗಿರುವ ಶೌಚಗುಂಡಿ
ಮಾತೃಶ್ರೀ ಬಡಾವಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಉಕ್ಕಿ ಹರಿಯುತ್ಗಿರುವ ಶೌಚಗುಂಡಿ
Published on: 

ಅನ್ಸಾರ್ ಇನೋಳಿ ಉಳ್ಳಾಲ

ಎಲ್ಲೋ ಮನೆಯಿದ್ದರೆ, ಇನ್ನೆಲ್ಲೋ ಶೌಚಗುಂಡಿ. ಮನೆ ನಿರ್ಮಾಣ ಸಂದರ್ಭ ಸರ್ಕಾರದ ನಿಯಮಗಳನ್ನು ಬಿಲ್ಡರ್ ಬಲಿಕೊಟ್ಟಿರುವುದು ಕೆಲವು ವರ್ಷಗಳ ಬಳಿಕ ಇದರ ಅಸಲಿಯತ್ತು ಅನಾವರಣಗೊಂಡಿದೆ. ಇದರಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನ ಎದ್ದಿದೆ. ಇಂಥ ಅವಾಂತರ ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಮನೆ, ಬಡಾವಣೆ ನಿರ್ಮಾಣದ ವೇಳೆ ಶೌಚಗುಂಡಿಯನ್ನು ಸ್ವಂತ ನಿವೇಶನ ಒಳಗಡೆಯೇ ನಿರ್ಮಿಸಬೇಕೆಂಬ ನಿಯಮವಿದೆ. ಆದರೆ ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾಸ್ತಾ ನಗರ ನಾಲ್ಕನೇ ಅಡ್ಡರಸ್ತೆಯಲ್ಲಿ ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸಾಯಿನಗರ ಮಾತೃಶ್ರೀ ಬಡಾವಣೆಯಲ್ಲಿ ಶೌಚಗುಂಡಿಗಳನ್ನು ಆಯಾ ಮನೆಗಳ ಆವರಣದಲ್ಲಿ ನಿರ್ಮಿಸುವ ಬದಲು ರಸ್ತೆಗಳಲ್ಲೇ ನಿರ್ಮಿಸಲಾಗಿದೆ.

ಅಂದೇ ಇದನ್ನು ತಡೆಯಬೇಕಾಗಿದ್ದ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಅನುಮತಿಯನ್ನೂ ನೀಡುವ ಮೂಲಕ ಬಿಲ್ಡರ್‌ಗಳಿಗೆ ಸಾಥ್ ನೀಡಿದ್ದಾರೆ. ಇದೀಗ ಶೌಚಗುಂಡಿ ತುಂಬಿ ನೀರು ಊರಿಡೀ ಹರಿದಾಡುತ್ತಿದ್ದು ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಸಿದೆ.

ಸಾಯಿನಗರ ಮಾತೃಶ್ರೀ ಬಡಾವಣೆಯಲ್ಲಿ 43 ಮನೆಗಳಿದ್ದು, ರಸ್ತೆಯಲ್ಲೇ ಶೌಚಗುಂಡಿಗಳನ್ನು ನಿರ್ಮಿಸಿ ಮೂರ್ನಾಲ್ಕು ಮನೆಗಳ ಸಂಪರ್ಕ ನೀಡಲಾಗಿದೆ. ಶೌಚಗುಂಡಿ ಆಯಾ ಮನೆಯ ಆವರಣದಲ್ಲೇ ಇರಬೇಕೆನ್ನುವ ನಿಯಮವನ್ನು ಇಲ್ಲಿ ಕತ್ತು ಹಿಚುಕಿ ಕೊಲೆಗೈಯ್ಯಲಾಗಿದೆ. ಇದ್ಯಾವುದರ ಅರಿವಿಲ್ಲದೆ ಮನೆ ಖರೀದಿಸಿದವರು ಈಗ ಎದುರಾಗಿರುವ ಸಮಸ್ಯೆಯಿಂದ ಕಂಗಾಲಾಗಿದ್ದಾರೆ.

ನಿಯಮ ಏನು ಹೇಳುತ್ತದೆ?

ಮನೆ ನಿರ್ಮಿಸುವಾಗ ಸ್ವಂತ ನಿವೇಶನದ ಒಳಗಡೆಯೇ ಶೌಚಗುಂಡಿ ನಿರ್ಮಿಸಬೇಕು. ಸಾರ್ವಜನಿಕ ರಸ್ತೆ, ಫುಟ್‌ಪಾತ್, ಚರಂಡಿ ಅಥವಾ ಸರ್ಕಾರದ ಇತರ ಯಾವುದೇ ಜಾಗದಲ್ಲಿ ಶೌಚಗುಂಡಿ ನಿರ್ಮಿಸುವುದು ಕಾನೂನುಬಾಹಿರ ಮತ್ತು ಅತಿಕ್ರಮಣವಾಗಿದೆ. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಶೌಚಗುಂಡಿ ನಿರ್ಮಿಸಿದರೆ ಅದನ್ನು ತೆರವುಗೊಳಿಸುವ ಅಧಿಕಾರ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಇದ್ದು, ಅದಕ್ಕೆ ತಗಲುವ ವೆಚ್ಚ ಹಾಗೂ ದಂಡವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬಹುದು ಎಂದು ನಿಯಮ ಹೇಳುತ್ತದೆ.

ಪಪಂ ಏನು ಮಾಡಬಹುದು?

ಈ ಬಡಾವಣೆ 2017ರಲ್ಲಿ ನಿರ್ಮಾಣ ಆಗಿದ್ದೆಂದು ಹೇಳಲಾಗಿದೆ. ಇಲ್ಲಿರುವ 43 ಮನೆಗಳಲ್ಲೂ ಜನ ವಾಸವಿದ್ದಾರೆ. ಕೆಲವು ದಿನಗಳಿಂದ ಶೌಚಗುಂಡಿ ತುಂಬಿ ನೀರು ಹರಿದಾಡುತ್ತಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಲು ಮುಂದಾದರೂ ಶೌಚಗುಂಡಿ ನಿರ್ಮಿಸುವುದೆಲ್ಲಿ? ಮನೆಯ ಆವರಣದಲ್ಲಿ ಜಾಗವಿದ್ದರೂ ಅದಕ್ಕೆ ತಗುಲುವ ಖರ್ಚು ಭರಿಸುವವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವುದೊಂದೇ ಇದಕ್ಕಿರುವ ಪರಿಹಾರ ಎನ್ನುವ ಮಾತುಗಳು ಕೇಳಿ ಬಂದಿವೆ. ಮುಂದಿನ ದಿನಗಳಲ್ಲಿ ಬಡಾವಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.

ಬಡಾವಣೆ ನಿರ್ಮಾಣ ಮಾಡುವ ಸಂದರ್ಭ ಶೌಚಗುಂಡಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದ್ದು ಈಗ ಗುಂಡಿ ತುಂಬಿ ಕೊಳಚೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕಿದೆ, ಸಮಸ್ಯೆ ಪರಿಹಾರಕ್ಕೆ ಒಳಚರಂಡಿ ವ್ಯವಸ್ಥೆ ಅನಿವಾರ್ಯ. ಈ ಬಗ್ಗೆ ಮುಂದಿನ ಸಭೆಯಲ್ಲಿ ಧ್ವನಿ ಎತ್ತುತ್ತೇನೆ.
ಹರೀಶ್ ರಾವ್, ಸದಸ್ಯ, ಕೋಟೆಕಾರ್ ಪ.ಪಂ.
ಕೆಲವು ಸಮಯದಿಂದ ಶೌಚಗುಂಡಿಗಳು ತುಂಬಿ ನೀರು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಇದರಿಂದಾಗಿ ಈ ಗುಂಡಿಗಳು ಸಾರ್ವಜನಿಕ ಸ್ಥಳದಲ್ಲೇ ಇದೆಯೆನ್ನುವುದು ಬೆಳಕಿಗೆ ಬಂದಿದೆ. ನೀರಿನ ದುರ್ನಾತದಿಂದ ಸಮಸ್ಯೆ ಆಗಿರುವುದರಿಂದ ಇದಕ್ಕೆ ಶಾಶ್ವತ ಪರಿಹಾರ ಬೇಕಿದೆ.
ಸುಮಿತ್ ಪಿ., ಸ್ಥಳೀಯ ನಿವಾಸಿ
ಸಾರ್ವಜನಿಕ ಸ್ಥಳದಲ್ಲಿ ಶೌಚಗುಂಡಿ ನಿರ್ಮಿಸುವಂತಿಲ್ಲ, ಆದರೂ ಹಿಂದೆ ಮನೆಗಳಿಗೆ ಅನುಮತಿ ನೀಡಲಾಗಿದೆ. ಈಗ ಸಮಸ್ಯೆ ಎದುರಾಗಿರುವುದರಿಂದ ಯಾವ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಿದೆಯೋ ಅದನ್ನು ಮಾಡಲಾಗುವುದು.
ಮಾಲಿನಿ, ಮುಖ್ಯಾಧಿಕಾರಿ, ಕೋಟೆಕಾರ್ ಪ.ಪಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net