ಕೋಳಿ ಅಂಕ ಪ್ರತ್ಯೇಕ ನಿಯಮ ರಚನೆ ಅಗತ್ಯ ಸ್ಪೀಕರ್ ಯು.ಟಿ.ಖಾದರ್

ಯು.ಟಿ.ಖಾದರ್
ಯು.ಟಿ.ಖಾದರ್
Published on
ಮಂಗಳೂರು: ತುಳುನಾಡಿನ ಸಂಸ್ಕೃತಿ, ಪರಂಪರೆಯಾಗಿ ಜಾತ್ರೆಗಳ ಸಂದರ್ಭ ಕೋಳಿ ಅಂಕ ನಡೆಸಿಕೊಂಡು ಬರಲಾಗುತ್ತಿದೆ. ಜೂಜು ರಹಿತ ಕೋಳಿ ಅಂಕ ನಡೆಸಲು ಅವಕಾಶ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ನಿಯಮ ರಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕೀಟ್‌ಹೌಸ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುನಾಡಿನ ಶಾಸಕನ ನೆಲೆಯಲ್ಲಿ ಪೂರಕ ಸಲಹೆಯನ್ನು ನೀಡಿದ್ದೇನೆ. ಕೋಳಿ ಅಂಕಗಳಲ್ಲಿ ಜೂಜು ನಡೆಯುತ್ತಿದ್ದರೆ ಅದರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸಂಘಟಕರೇ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಸೂಕ್ತ ನಿಯಮ ರಚನೆಯಾಗುವ ವಿಶ್ವಾಸವಿದೆ ಎಂದರು.
ದ್ವೇಷದ ರಾಜಕಾರಣ ಸರಿಯಲ್ಲ: ರಾಜಕಾರಣದಲ್ಲಿ ಸಿನಿಮೀಯ ಶೈಲಿ, ದ್ವೇಷ ರಾಜಕಾರಣ ಸರಿಯಲ್ಲ. ಇಂತಹ ಕೃತ್ಯಗಳಿಂದಾಗಿಯೇ ಜನರಿಗೆ ಜನಪ್ರತಿನಿಧಿಗಳ ಮೇಲಿನ ಗೌರವ ಕಡಿಮೆಯಾಗಿದೆ. ಶಾಸಕರಾಗಿದ್ದುಕೊಂಡು ಒಬ್ಬರಿಗೊಬ್ಬರು ಪರಸ್ಪರ ಬೆದರಿಕೆ ನೀಡುವುದು ತಪ್ಪು ನಡವಳಿಕೆ ಎಂದು ಯು.ಟಿ.ಖಾದರ್ ಬಳ್ಳಾರಿಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಯಾರು ದ್ವೇಷ ಭಾಷಣ ಮಾಡುತ್ತಾರೆಯೋ ಅವರ ಮೇಲೆ ಕ್ರಮ ಆಗುವುದು. ದೇಶ ಬಲಿಷ್ಟವಾಗಬೇಕಾದರೆ ಪ್ರತಿಯೊಬ್ಬರು ತಾವು ಆಡುವ ಮಾತು, ಮಾಡುವ ಕೆಲಸದ ಬಗ್ಗೆ ನಿಗಾ ಇರಿಸಬೇಕು. ಕಾನೂನಿನಲ್ಲಿ ಲೋಪ ದೋಷ ಇದ್ದಲಿ ಅದರ ಬಗ್ಗೆ ಲಿಖಿತವಾಗಿ ನೀಡಿದರೆ ಅದನ್ನು ಸರಿಪಡಿಸಬಹುದು. ಅದು ಬಿಟ್ಟು ವಿನಾ ಕಾರಣ ವಿರೋಧಿಸುವುದು ಸರಿಯಲ್ಲ ಎಂದು ದ್ವೇಷ ಭಾಷಣ ತಡೆ ಕಾನೂನಿನ ಕುರಿತು ಬಿಜೆಪಿ ವಿರೋಧದ ಪ್ರಶ್ನೆಗೆ ಅವರು ಉತ್ತರಿಸಿದರು.
ಸಿಎಂ ಆಗಲು ಅರ್ಜಂಟ್ ಇಲ್ಲ
ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಈ ಪಟ್ಟಿಯಲ್ಲಿ ನೀವು ಇದ್ದೀರಾ ಎಂಬ ಪ್ರಶ್ನೆಗೆ, ಅಷ್ಟು ಅರ್ಜೆಂಟ್ ನನಗಿಲ್ಲ. ಇನ್ನೂ 20 ವರ್ಷ ಕಳೆಯಲಿ. ನನ್ನ ಕ್ಷೇತ್ರದಲ್ಲಿ ಮತ್ತೆ ನಾಲ್ಕು ಬಾರಿ ಗೆಲ್ಲಿಸಿ ಕಳುಹಿಸಲಿ ಎಂದು ಖಾದರ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net