

ಪುತ್ತೂರು ಗ್ರಾಮಾಂತರ: ಸರ್ಕಾರಿ ಶಾಲೆ ಜೀವನ ರೂಪಿಸುವ ದೇಗುಲವಾಗಿದೆ. ಪ್ರಾಥಮಿಕ ಶಿಕ್ಷಣ ಮುಗಿದು ವರ್ಗಾವಣೆ ಪತ್ರ ಪಡೆದು ಮೇಲ್ಪಂಕ್ತಿಗೆ ಹೋದರೂ ನಾವು ಕಲಿತ ನಮ್ಮೂರ ಶಾಲೆಯನ್ನು ಮರೆಯಲಾಗುವುದಿಲ್ಲ. ಚಿನ್ನಕ್ಕಾದರೂ ಬೆಲೆ ಕಟ್ಟಬಹುದು, ನಾವು ಕಲಿತ ಶಾಲೆಗೆ ಬೆಲೆ ಕಟ್ಟಲಾಗದು. ಗುಣಮಟ್ಟದ ಶಿಕ್ಷಣ ಪಡೆಯುವುದು ಇಂದಿನ ಅಗತ್ಯ ಎಂದು ವಕೀಲ ಭಾಸ್ಕರ ಕೋಡಿಂಬಾಳ ಹೇಳಿದರು.
ವೀರಮಂಗಲ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪಿಎಂಶ್ರೀ ಸಡಗರ’- ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ‘ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ’ ಎಂಬ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ವಸಂತ ವೀರಮಂಗಲ ಅಧ್ಯಕ್ಷತೆ ವಹಿಸಿದ್ದರು. ಪಲ್ಲತ್ತಾರು ಶಾಲೆ ಮುಖ್ಯ ಶಿಕ್ಷಕ ಸೀತಾರಾಮ ಕೆ.ಜಿ., ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹರ್ಷ ಗುತ್ತು, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ತಾರಾನಾಥ ಸವಣೂರು ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ವೀರಮಂಗಲ ವಂದಿಸಿದರು. ಹಿರಿಯ ವಿದ್ಯಾರ್ಥಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.