ವಾಲ್ಮೀಕಿ ಆದಿವಾಸಿ ವಸತಿ ಶಾಲೆಗೆ 3.25 ಕೋಟಿ ರೂ. ಅನುದಾನ

 ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ.
ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ.
Published on
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾರಾವಿಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಡಿಎ-ಜೆಜಿಯುಎ ಯೋಜನೆಯಡಿ ಒಟ್ಟು 3.25 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಈಗಾಗಲೇ 2 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ. ನಾರಾವಿಯಲ್ಲಿರುವ ಪ್ರಸ್ತುತ ಶಾಲಾ ಕಟ್ಟಡ ಸುಮಾರು 60 ವರ್ಷಗಳಷ್ಟು ಹಳೆಯದಾಗಿದೆ. ವರ್ಷ ಕಳೆದಂತೆ ಕಟ್ಟಡ ಶಿಥಿಲಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷೆ ಹಾಗೂ ಶೈಕ್ಷಣಿಕ ವಾತಾವರಣದ ದೃಷ್ಟಿಯಿಂದ ಹೊಸ ಕಟ್ಟಡದ ಅಗತ್ಯವಿತ್ತು. ಪ್ರಸ್ತುತ ಶಾಲೆಯಲ್ಲಿ ಆರು ತರಗತಿಗಳಲ್ಲಿ ಸುಮಾರು 110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಏಳು ನೂತನ ತರಗತಿ ಕೊಠಡಿಗಳ ನಿರ್ಮಾಣಕ್ಕೆ 2.45 ಕೋಟಿ ರೂ. ಅನುದಾನ ಮಂಜೂರಾಗಿದೆ. ಬಾಲಕಿಯರಿಗೆ ಎರಡು ಬ್ಲಾಕ್ ಹಾಗೂ ಬಾಲಕರಿಗೆ ಎರಡು ಬ್ಲಾಕ್ ಸೇರಿದಂತೆ ಒಟ್ಟು ನಾಲ್ಕು ಬ್ಲಾಕ್ ಶೌಚಗೃಹಗಳ ನಿರ್ಮಾಣಕ್ಕೆ 80 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಈ ಕಾಮಗಾರಿಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಹಾಸ್ಟೆಲ್ ಸಮೀಪವೇ ಶಾಲೆ

ಪ್ರಸ್ತುತ ಶಾಲೆ ಹಾಗೂ ವಿದ್ಯಾರ್ಥಿ ವಸತಿ ನಿಲಯದ ನಡುವೆ ಸುಮಾರು ಅರ್ಧ ಕಿಲೋಮೀಟರ್ ಅಂತರವಿದೆ. ಪ್ರತಿದಿನ ಹಾಸ್ಟೆಲ್‌ನಿಂದ ಶಾಲೆಗೆ ತೆರಳಬೇಕಾಗಿರುವುದರಿಂದ, ಸಣ್ಣ ವಯಸ್ಸಿನ ವಿದ್ಯಾರ್ಥಿಗಳಿಗೆ ಕೊಂಚ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಮೀಪದಲ್ಲಿಯೇ ನೂತನ ಶಾಲಾ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಇದರಿಂದ ವಿದ್ಯಾರ್ಥಿಗಳ ಸಮಯ ಉಳಿತಾಯವಾಗುವುದಲ್ಲದೆ, ಅವರ ಸುರಕ್ಷತೆಗೂ ಅನುಕೂಲವಾಗಲಿದೆ.

ಈ ಕಾಮಗಾರಿಗಳಿಂದ ಆದಿವಾಸಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಮತ್ತು ಮೂಲಸೌಕರ್ಯ ದೊರೆಯಲಿವೆ. ಮಹತ್ವದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಹಾಗೂ ಮಂಜೂರಾತಿಗೆ ಸಹಕಾರ ನೀಡಿದ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ವಂದನೆಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net